

ಹುಬ್ಬಳ್ಳಿ: ಒಂದೆಡೆ ಕೆರೆಗಳು ಹೋಗಿ ಮೈದಾನ, ಕ್ರೀಡಾಂಗಣ, ಬಹುಮಹಡಿ ಕಟ್ಟಡಗಳಾಗಿ ಪರಿವರ್ತನೆಯಾಗುತ್ತಿವೆ. ಅಳಿದುಳಿದ ಕೆರೆಗಳು ಒಳಚರಂಡಿ ಕೊಳಚೆ ತುಂಬಿಕೊಂಡು ಗಬ್ಬೆದ್ದು ಹೋಗಿವೆ. ಆಧುನಿಕತೆಯ ಭರಾಟೆಯಲ್ಲಿ ಎಲ್ಲಿಯೂ ಜಲಮೂಲಗಳ ಸಂರಕ್ಷಣೆಯಾಗುತ್ತಿಲ್ಲ. ಇದರ ಪರಿಣಾಮ ಮುಂದೊಂದು ದಿನ ನಗರ ಜೀವನ ಅಪಾಯಕ್ಕೆ ಸಿಲುಕುವುದು ನಿಶ್ಚಿತ.
ಅತಿ ದೊಡ್ಡ ಮಳೆಯಾದರೆ ಹುಬ್ಬಳ್ಳಿ - ಧಾರವಾಡ ಮಹಾನಗರದ ಅನೇಕ ಕಡೆಗಳಲ್ಲಿ ಮನೆ, ಬಡಾವಣೆ ಜಲಾವೃತ ಎಂಬ ಸುದ್ದಿ ಕೇಳಿಯೇ ಕೇಳುತ್ತೇವೆ. ಇನ್ನು ಮಳೆಯಾಗದಿದ್ದರೆ? ಕುಡಿಯುವ ನೀರಿಗೆ ತುಟಾಗ್ರತೆ! ಹೇಗಿದೆ ನೋಡಿ ನಗರ ಜೀವನ...
ಹೌದು. ಇನ್ನು ಎರಡು ಅಥವಾ ಮೂರು ದಶಕದಲ್ಲಿ ಹುಬ್ಬಳ್ಳಿ- ಧಾರವಾಡ ಮಹಾನಗರಗಳು ಜಲಕಂಟಕ ಎದುರಿಸುವ ಅಪಾಯವಿದೆ ಎಂದು ಅಂತಾರಾಷ್ಟ್ರೀಯ ಸರ್ಕಾರೇತರ ಸಂಸ್ಥೆಯೊಂದು ವರದಿಯಲ್ಲಿ ಎಚ್ಚರಿಸಿದೆ.
ಅಂಥ ಪರಿಸ್ಥಿತಿಗೆ ಏನು ಕಾರಣ ಎಂದು ಮೂಲ ಕೆದಕುತ್ತ ಹೋದರೆ ಜಲಮೂಲಗಳು ಹಾಗೂ ಅರಣ್ಯೀಕರಣದ ಬಗ್ಗೆ ನಿರ್ಲಕ್ಷ್ಯವೇ ಅಪಾಯ ತಂದೊಡ್ಡುತ್ತಿದೆ ಎನ್ನುವುದು ಖಚಿತವಾಗುತ್ತದೆ.
ಜಲಾವೃತವಾಗುವ ಪ್ರದೇಶಗಳನ್ನು ನೋಡಿದಾಗ ಹಿಂದೊಮ್ಮೆ ಆ ಭಾಗದಲ್ಲಿ ಕೆರೆ ಅಥವಾ ಜವಳು ಪ್ರದೇಶ ಇತ್ತೆಂಬ ಮಾಹಿತಿ ಸಿಗುತ್ತದೆ. ಊರು, ನಾಗರಿಕತೆ ಬೆಳೆದಂತೆ ಜಲಮೂಲಗಳನ್ನೂ ರಕ್ಷಿಸಿ ಪೋಷಿಸಿಕೊಂಡು ಹೋಗಬೇಕೆನ್ನುವ ಸಾಮಾನ್ಯ ಜ್ಞಾನವನ್ನು ಆಡಳಿತ ವ್ಯವಸ್ಥೆ ತೋರಿಸುತ್ತಿಲ್ಲ. ಹುಬ್ಬಳ್ಳಿಯ ನೆಹರು ಮೈದಾನ ಹಿಂದೊಂದು ಕಾಲದಲ್ಲಿ ಕೆರೆಯೇ ಆಗಿತ್ತು. ಇಂತಹ ಹತ್ತಾರು ಉದಾಹರಣೆಗಳು ಇಲ್ಲಿ ಸಿಗುತ್ತವೆ.
ಅವೈಜ್ಞಾನಿಕ ನಗರೀಕರಣ
ಸದ್ಯ ಎಲ್ಲಿಯೂ ವೈಜ್ಞಾನಿಕ ನಗರೀಕರಣ ಆಗುತ್ತಿಲ್ಲ. ಇದ್ದ ಕೆರೆ, ಬಾವಿಗಳನ್ನು ಯಾವ್ಯಾವುದೋ ಉದ್ದೇಶಕ್ಕಾಗಿ ಮುಚ್ಚಲಾಗುತ್ತಿದೆ. ಅನೇಕ ಬಡಾವಣೆ, ವಸತಿ ವಿನ್ಯಾಸದ ಮಲಿನ ತ್ಯಾಜ್ಯ ನೀರು ಅಕ್ಕಪಕ್ಕದ ಕೆರೆಗಳಿಗೆ ಸೇರುತ್ತಿದೆ. ಒಳಚರಂಡಿ ಕೊಳಚೆಗೆ ಸರಿಯಾದ ಮಾರ್ಗ ತೋರಿಸುವ ಕಾರ್ಯ ಅಧಿಕಾರಿ ವರ್ಗದಿಂದ ಆಗುತ್ತಿಲ್ಲ ಎಂಬುದು ನೋವಿನ ಸಂಗತಿ.
ಹತ್ತಿಪ್ಪತ್ತು ವರ್ಷದಲ್ಲಿ ಇಂತಹ ಕೆರೆಗಳು ಅಸ್ತಿತ್ವ ಕಳೆದುಕೊಳ್ಳುವುದರಿಂದ ಹುಬ್ಬಳ್ಳಿ- ಧಾರವಾಡದಲ್ಲಿ ಕುಡಿಯುವ ನೀರಿಗೂ ತತ್ವಾರ ಬರುವ ಸಾಧ್ಯತೆ ಇದೆ. ಜಲಕಂಟಕ ಎದುರಾಗುವ ದೇಶದ 30 ಮಹಾನಗರಗಳ ಪಟ್ಟಿಯಲ್ಲಿ ಹುಬ್ಬಳ್ಳಿ- ಧಾರವಾಡ ಸೇರಿರುವುದು ಜನತೆಯ ಆತಂಕ ಹೆಚ್ಚಿಸಿದೆ.
ಬಹುತೇಕ ಮಲಿನ
ಅವಳಿ ನಗರದ ಎಂಟು ಕೆರೆಗಳು ಮಾಲಿನ್ಯ ನಿಯಂತ್ರಣ ಮಂಡಳಿಯ ಉಸ್ತುವಾರಿಯಲ್ಲಿವೆ. ಅವುಗಳ ನೀರನ್ನು ಪ್ರತಿ ತಿಂಗಳು ಸ್ಯಾಂಪಲ್ ಪಡೆದು ಪರೀಕ್ಷೆ ನಡೆಸಲಾಗುತ್ತದೆ. ಕಳೆದ ಮೂರ್ನಾಲ್ಕು ವರ್ಷದಿಂದ ಪ್ರತಿ ಬಾರಿಯೂ ಕೆರೆಯಲ್ಲಿ ಒಳಚರಂಡಿ ಕೊಳಚೆ ಪತ್ತೆಯಾಗುತ್ತಿದೆ. ಅದು ವರ್ಷದಿಂದ ವರ್ಷ ಹೆಚ್ಚುತ್ತಿದೆ ಕೂಡ ಎಂದು ಮಂಡಳಿ ವರದಿ ಮಾಡುತ್ತಲೇ ಇದೆ.
ಆದರೆ, ಕೆರೆಗಳ ಮಾಲಿನ್ಯ ತಡೆಯಲು ಸರ್ಕಾರಗಳು, ಸ್ಥಳೀಯಾಡಳಿತಗಳು ಗಂಭೀರ ಪ್ರಯತ್ನ ಮಾಡುತ್ತಿಲ್ಲ.
ಹಲವು ಕೋಟಿ ರೂ. ವೆಚ್ಚ:
ಅವಳಿನಗರ ವ್ಯಾಪ್ತಿಯ ಕೆರೆಗಳ ನಿರ್ವಹಣೆ ಹೆಸರಲ್ಲಿ ಕಳೆದ ಒಂದು ದಶಕದಿಂದ ನೂರಾರು ಕೋಟಿ ರೂ. ವೆಚ್ಚವಾಗಿರಬಹುದು. ಇದೀಗ ಸ್ಮಾರ್ಟ್ಸಿಟಿ ಸೇರಿ ಬೇರೆಬೇರೆ ಯೋಜನೆಗಳ ಹೆಸರಲ್ಲೂ ಹಲವು ಕೋಟಿ ರೂ.ಗಳು ಇನ್ನೂ ಹರಿಯುತ್ತಲೇ ಇದೆ. ಉಣಕಲ್ಲ ಕೆರೆಯೊಂದಕ್ಕೇ ಅಂದಾಜು 15 ಕೋಟಿ ರೂ. ಸುರಿಯಲಾಗುತ್ತಿದೆ. ಆದಾಗ್ಯೂ ಕೆರೆಯು ಮಾಲಿನ್ಯದಿಂದ ಮುಕ್ತವಾಗುತ್ತದೆ ಎಂಬ ಖಾತ್ರಿ ಇಲ್ಲ ಎಂಬುದು ಪರಿಸರ ಪ್ರಿಯರ ದುಃಖಕ್ಕೆ ಕಾರಣವಾಗಿದೆ.
ಹು-ಧಾ ಅವಳಿನಗರ ವ್ಯಾಪ್ತಿಯಲ್ಲಿ ಬಹುತೇಕ ಕೆರೆಗಳಿಗೆ ಒಳಚರಂಡಿ ನೀರು ಸೇರುತ್ತಿದೆ. ಈ ಬಗ್ಗೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಯನ ಮಾಡಿ ವರದಿಯನ್ನೂ ಮಾಡಿದೆ. ಧಾರವಾಡದ ಕೆಲಗೇರಿ, ಕೋಳಿಕೆರೆ, ನವಲೂರ ಕೆರೆ, ಹುಬ್ಬಳ್ಳಿಯ ಉಣಕಲ್ಲ ಕೆರೆ ಸೇರಿ ಹಲವು ಕೆರೆಗಳಿಗೆ ಕೊಳಚೆ ನೀರು ಸೇರುತ್ತಿದೆ.| ಶೋಭಾ ಪೋಳ, ಪರಿಸರ ಅಧಿಕಾರಿ, ಧಾರವಾಡ