

ತುಮಕೂರು : ಜಿಲ್ಲೆಯಲ್ಲಿರುವ ಕೆರೆಗಳನ್ನು ಮಲಿನಗೊಳಿಸದೆ ಸಂರಕ್ಷಿಸುವುದು ಎಲ್ಲರ ಜವಾಬ್ದಾರಿ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರೂ ಆದ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿಗಾರ್ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ವಕೀಲರ ಸಂಘದ ಸಹಯೋಗದಲ್ಲಿ ಮಂಗಳವಾರ ವಿಶ್ವ ಜಲ ದಿನಾಚರಣೆ ಅಂಗವಾಗಿ ಮಂಗಳವಾರ ನಗರದ ಮರಳೂರು ಕೆರೆ ದಂಡೆಯಲ್ಲಿ ಏರ್ಪಡಿಸಿದ್ದ ಕೆರೆ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ವಿಶ್ವಸಂಸ್ಥೆಯ ಆಶಯದಂತೆ ನೀರಿನ ಮಹತ್ವ ಮತ್ತು ಜಲ ಸಂರಕ್ಷಣೆ ಕುರಿತು ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಈ ಸ್ವತೆ ಹಮ್ಮಿಕೊಳ್ಳಲಾಗಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ಅಂತರ್ಜಲ ಬತ್ತಿ ಹೋಗುತ್ತಿದ್ದು, ಕೆರೆಗಳಲ್ಲಿ ನೀರು ಭರ್ತಿಯಾಗುತ್ತಿಲ್ಲ. ಗಿಡ-ಮರಗಳನ್ನು ಕಡಿಯುತ್ತಿರುವುದರಿಂದ ಉತ್ತಮ ಮಳೆ ಬಾರದಾಗಿದೆ. ಈ ನಿಟ್ಟಿನಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕಾರ್ಯಕ್ರಮಗಳ ಬಗ್ಗೆ ಅರಿವು ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.
ಕಳೆದ ವರ್ಷವೂ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಹಮ್ಮಿಕೊಂಡಿದ್ದರಿಂದ ಕೆರೆ ದಂಡೆ ಸ್ವಚ್ಛವಾಗಿ ಕಾಣುತ್ತಿದೆ. ಮುಂದಿನ ಪೀಳಿಗೆಗೆ ಶುದ್ಧ ನೀರಿನ ಸಮಸ್ಯೆಯಾಗದಂತೆ ನೀರಿನ ಸಂರಕ್ಷಣೆ ಮಾಡುವ ಪಣತೊಡಬೇಕೆಂದು ಕರೆ ನೀಡಿದರು.
ಪಾಲಿಕೆ ಸದಸ್ಯ ಧರಣೇಂದ್ರ ಕುಮಾರ್ ಮಾತನಾಡಿ, ವರ್ಷದ ಹಿಂದೆ ಮರಳೂರು ಕೆರೆ ದಂಡೆಯಲ್ಲಿ ಕಸದ ರಾಶಿಯೇ ತುಂಬಿಕೊಂಡಿತ್ತು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಪಾಲಿಕೆ ವತಿಯಿಂದ ಕ್ರಮಕೈಗೊಂಡ ಹಿನ್ನೆಲೆಯಲ್ಲಿ ಕಸ ಸುರಿಯುವುದು ತಪ್ಪಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳ ಮುಂದಾಳತ್ವದಲ್ಲಿ ಮೂರು ತಿಂಗಳಿಗೊಮ್ಮೆ ಈ ಕೆರೆ ದಂಡೆಯಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡಿದ್ದರಿಂದ ಜನ ಎಚ್ಚೆತ್ತು, ಕಸ ಸುರಿಯುವುದು ಬಿಟ್ಟಿದ್ದಾರೆ. ಸಣ್ಣ ನೀರಾವರಿ ಇಲಾಖೆಯಿಂದ ಕೆರೆ ಸ್ವಚ್ಛಗೊಳಿಸಲು 1.5 ಕೋಟಿ ರೂ. ಟೆಂಡರ್ ಕರೆಯಲಾಗಿದ್ದು, ಶೀಘ್ರದಲ್ಲೇ ಸ್ವಚ್ಛತಾ ಕಾರ್ಯ ಕೈಗೆತ್ತಿಕೊಳ್ಳಲಿದ್ದಾರೆ ಎಂದರು.
ನಗರ ನೀರು ಸರಬರಾಜು ಮಂಡಳಿಗೆ ಸ್ಥಳಾವಕಾಶ ಹಾಗೂ ಮತ್ತಿತರ ಸೌಕರ್ಯ ಕಲ್ಪಿಸಿದಲ್ಲಿ ಮರಳೂರು ಕೆರೆಯಿಂದ ನಗರದ ಶೇ.25 ಪ್ರದೇಶಗಳಿಗೆ ನೀರು ಸರಬರಾಜು ಮಾಡಲು ಅನುಕೂಲವಾಗುತ್ತದೆ. ಸ್ಮಾರ್ಟ್ ಸಿಟಿ ಮತ್ತು ಪಾಲಿಕೆಯಿಂದ ಕೆರೆಯ ಸುತ್ತ ಫೆನ್ಸಿಂಗ್ ಹಾಗೂ ಲೈಟಿಂಗ್ ವ್ಯವಸ್ಥೆ ಮಾಡಿದರೆ ಕೆರೆ ನೀರು ಕಲುಷಿತವಾಗದಂತೆ ತಡೆಯಬಹುದು ಎಂದರು. ಪೌರಕಾರ್ಮಿಕರು, ಎನ್‌ಸಿಸಿ ಕೆಡೆಟ್ ವಿದ್ಯಾರ್ಥಿಗಳು ಸ್ವಚ್ಛತಾ ಕಾರ್ಯಕ್ರಮದಲ್ಲಿ ತೊಡಗಿಕೊಂಡಿದ್ದರು.
ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ, ವಕೀಲರ ಸಂಘದ ಪ್ರಧಾನ ಕಾಯದರ್ಶಿ ಡಿ.ಸಿ.ಹಿಮಾನಂದ್, ಪಾಲಿಕೆ ವೈದ್ಯಾಧಿಕಾರಿ ಡಾ.ರಕ್ಷಿತ್, ಪರಿಸರ ಇಂಜಿನಿಯರ್ ಕೃಷ್ಣಮೂರ್ತಿ, ಆರೋಗ್ಯ ನಿರೀಕ್ಷಕ ಆನಂದ್, ಲೆಫ್ಟಿನೆಂಟ್‌ಗಳಾದ ಪ್ರದೀಪ್ ಕುಮಾರ್ ಹಾಗೂ ಜಯಪ್ರಕಾಶ್ ಮತ್ತಿತರರು ಇದ್ದರು.
ಆಧುನೀಕರಣದ ನೆಪದಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿರುವ ಕೆರೆ-ಕಟ್ಟೆಗಳನ್ನು ಸಂರಕ್ಷಿಸದಂತಾಗಿದೆ. ಇನ್ನಾದರೂ ಎಚ್ಚೆತ್ತುಕೊಂಡು ಪ್ರಾಮಾಣಿಕವಾಗಿ ಪ್ರಯತ್ನ ಮಾಡುವ ಮೂಲಕ ಕೆರೆ-ಕಟ್ಟೆ ಸೇರಿ ನೀರಿನ ಮೂಲಗಳನ್ನು ಸಂರಕ್ಷಿಸಬೇಕು. ಕೆರೆಗಳನ್ನು ಸ್ವಚ್ಛಗೊಳಿಸುವುದರಿಂದ ಸಕಲ ಜೀವರಾಶಿಗಳಿಗೂ ಕುಡಿಯುವ ನೀರಿನ ತೊಂದರೆಯಾಗದಂತೆ ರಕ್ಷಿಸಬಹುದು. ಡಾ.ಕೆ.ವಿದ್ಯಾಕುಮಾರಿ ಜಿಪಂ ಸಿಇಒ ನೀರು ತುಂಬಿ ಹಸಿರಿನಿಂದ ಕಂಗೊಳಿಸುತ್ತಿದ್ದ ಮರಳೂರು ಕೆರೆ ಸಂರಕ್ಷಣೆಯಿಲ್ಲದೆ ಅನೈರ್ಮಲ್ಯದಿಂದ ಕೂಡಿತ್ತು. ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಪಾಲಿಕೆಯ ಸಹಕಾರದಲ್ಲಿ ಸ್ವಚ್ಛತಾ ಕಾಮಗಾರಿ ಕೈಗೊಂಡಿದ್ದರಿಂದ ಮತ್ತೊಮ್ಮೆ ಕೆರೆಗೆ ಮರುಜೀವ ಬಂದಂತಾಗಿದೆ. ಗೋಪಾಲಗೌಡ ವಕೀಲ ಸಂಘದ ಅಧ್ಯಕ್ಷ