

ಕುಶಾಲನಗರ: ನದಿ, ಕೆರೆ ಹಾಗೂ ಜಲಮೂಲಗಳ ಸಂರಕ್ಷಣೆಗೆ ಸರ್ಕಾರ, ಸಂಘ-ಸಂಸ್ಥೆಗಳು ಕಾರ್ಯ ಯೋಜನೆಗಳನ್ನು ರೂಪಿಸಬೇಕು ಎಂದು ಕುಶಾಲನಗರ ಲಯನ್ಸ್ ಸಂಸ್ಥೆ ಅಧ್ಯಕ್ಷ ಸುಮನ್ ಬಾಲಚಂದರ್ ಹೇಳಿದರು.
ಕುಶಾಲನಗರದ ಕಾವೇರಿ ಮಹಾ ಆರತಿ ಬಳಗದ ಆಶ್ರಯದಲ್ಲಿ ಬುಧವಾರ ಆಯೋಜಿಸಿದ್ದ 147ನೇ ಕಾವೇರಿ ಮಹಾ ಆರತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಲಯನ್ಸ್ ಸಂಸ್ಥೆ ಮೂಲಕ ನದಿ, ಪ್ರಕೃತಿ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ಕಾರ್ಯಕ್ರಮಗಳಿಗೆ ಲಯನ್ಸ್ ಮೂಲಕ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.
ವಾಸವಿ ಯುವಜನ ಸಂಘದ ವಿ.ವೈಶಾಕ್ ಮಾತನಾಡಿದರು. ಅರ್ಚಕ ಯೋಗೀಶ್ ಭಟ್ ಕುಂಕುಮಾರ್ಚನೆ, ಅಷ್ಟೋತ್ತರ ನೆರವೇರಿಸಿ ನದಿಗೆ ಮಹಾ ಆರತಿ ಬೆಳಗಿದರು.
ಲಯನ್ಸ್ ಕಾರ್ಯದರ್ಶಿ ಟಿ.ಕೆ.ರಾಜಶೇಖರ್, ಖಜಾಂಚಿ ನಿತಿನ್ ಗುಪ್ತ, ವಾಸವಿ ಯುವಜನ ಸಂಘದ ಪ್ರವೀಣ್ ಕುಮಾರ್, ಆರತಿ ಬಳಗದ ಸಂಚಾಲಕಿ ವನಿತಾ ಚಂದ್ರಮೋಹನ್ ಮತ್ತಿತರರು ಇದ್ದರು.