ಜಲಮೂಲ ಅಭಿವೃದ್ಧಿಗೆ ಕ್ರಮ ; ಸಂಸದ ಜಿ.ಎಸ್.ಬಸವರಾಜು ಹೇಳಿಕೆ

30TMK_Gangasandra_GSB
Published on

ತುಮಕೂರು : ತುಮಕೂರು ಸುತ್ತಲಿನ 6 ಕಿ.ಮೀ.ವ್ಯಾಪ್ತಿಯಲ್ಲಿರುವ ಜಲಮೂಲ ಗುರುತಿಸಿ ಅಭಿವೃದ್ಧಿಪಡಿಸಲು ಸಮಾನ ಮನಸ್ಕ ಇಲಾಖೆಗಳ ಸಹಯೋಗದಲ್ಲಿ ಯೋಜನೆ ರೂಪಿಸಲಾಗುವುದು ಎಂದು ಸಂಸದ ಜಿ.ಎಸ್.ಬಸವರಾಜು ಹೇಳಿದರು.

5ಕೋಟಿ ರೂಪಾಯಿ ವೆಚ್ಚದಲ್ಲಿ ನಗರದ 11ನೇ ವಾರ್ಡ್ ಗಂಗಸಂದ್ರ ಕೆರೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಗಂಗಸಂದ್ರ ಕೆರೆ ಅಭಿವೃದ್ಧಿಗೆ 30 ಕೋಟಿ ರೂ. ಅನುದಾನ ಒದಗಿಸಲಾಗುವುದು ಎಂದರು. ಕೆರೆ ಏರಿ ಬಿಗಿಗೊಳಿಸಲು ಆರಂಭದಲ್ಲಿ 5 ಕೋಟಿ ರೂ. ನೀಡಲಾಗಿದೆ, ಭವಿಷ್ಯದಲ್ಲಿ ಸಣ್ಣ ನೀರಾವರಿ ಇಲಾಖೆ, ಸಂಸದರ ಅನುದಾನದಲ್ಲಿಯೂ ನೆರವು ನೀಡಲಾಗುವುದು ಎಂದು ಭರವಸೆ ನೀಡಿದರು.

ಭಾರತ ಸರ್ಕಾರ ದೇಶದ 8 ನಗರಗಳನ್ನು ಜಲಮೂಲಗಳ ಅಭಿವೃದ್ಧಿಗೆ ಆಯ್ಕೆ ಮಾಡಿದ್ದು, ಇದರಲ್ಲಿ ತುಮಕೂರು ಕೂಡ ಇದೆ. ಗಂಗಸಂದ್ರ, ಶೆಟ್ಟಿಹಳ್ಳಿ,ಬಡ್ಡಿಹಳ್ಳಿ, ಗುಂಡ್ಲಮ್ಮನಕೆರೆ, ಉತ್ತರಕಟ್ಟೆ, ಹೊನ್ನೇನಹಳ್ಳಿ ಕೆರೆ ಸೇರಿ ಹಲವಾರು ಕೆರೆಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದರು.

ಶಾಶ್ವತವಾಗಿ ವರ್ಷದ 12 ತಿಂಗಳು ನೀರು ನಿಲ್ಲುವಂತೆ ಮಾಡುವ ಯೋಜನೆ ಇದಾಗಿದೆ. ಇದರಿಂದ ನಗರದಲ್ಲಿ ಅಂತರ್ಜಲ ವೃದ್ಧಿಸಲಿದೆ, ನಗರದ ಜನರಿಗೆ ಕುಡಿಯಲು ಯೋಗ್ಯವಾದ ಸಿಹಿ ನೀರು ಲಭ್ಯವಾಗಲಿದೆ ಎಂದರು.

ಟೂಡಾ ಅಧ್ಯಕ್ಷ ಬಿ.ಎಸ್.ನಾಗಣ್ಣ ಮಾತನಾಡಿ, ಜಲಮೂಲಗಳ ಅಭಿವೃದ್ಧಿ ಯೋಜನೆಯಡಿ ಪ್ರಥಮವಾಗಿ ಇಂದು ಗಂಗಸಂದ್ರ ಕೆರೆಯ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಟೂಡಾ ಮೊದಲ ಹಂತದಲ್ಲಿಯೇ 6 ಕೋಟಿ ರೂ. ಖರ್ಚು ಮಾಡಲಿದೆ ಎಂದರು.

ಪಾಲಿಕೆ ಸದಸ್ಯರಾದ ಮನು, ತ್ಯಾಗರಾಜಸ್ವಾಮಿ, ಮಾಜಿ ಸದಸ್ಯ ಹನುಮಂತ ರಾಯಪ್ಪ, ಟುಡಾ ಆಯುಕ್ತ ಯೋಗಾನಂದ್,ಟೂಡಾ ಸದಸ್ಯರಾದ ಜಗದೀಶ್, ಪ್ರತಾಪ್, ಎಇಇ ರಂಗನಾಥ್, ಶರತ್, ಎಇ ಚಂದ್ರಶೇಖರ್, ಗುತ್ತಿಗೆದಾರ ಎಸ್.ಶಿವಪ್ರಸಾದ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net