ಜಲದುರ್ಗ ಅಭಿವೃದ್ಧಿಗೊಳಿಸದ ಗ್ರಾಪಂ ಸದಸ್ಯರು

jyp press
Published on

ಜಯಪುರ: ಜಯಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಲದುರ್ಗ ಚೌಡಿಕಟ್ಟೆ ಬೂತ್‌ನಿಂದ ಮೂರು ಸದಸ್ಯರಿದ್ದರೂ ಜಲದುರ್ಗಕ್ಕೆ ಇವರ ಕೊಡುಗೆ ಶೂನ್ಯ ಎಂದು ಮೇಗುಂದ ಹೋಬಳಿ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೆ.ವಿ.ಸಂದೀಪ್ ದೂರಿದರು.

ಸಂಪತ್‌ಕುಮಾರ್, ಪ್ರವೀಣ್‌ಕುಮಾರ್, ಜಯಾ ಮುರುಗೇಶ್ ಇದ್ದರೂ ಗ್ರಾಮದ ಅಭಿವೃದ್ಧಿಗೆ ಶ್ರಮಿಸಿಲ್ಲ. ಜಲದುರ್ಗದ ಕುಡಿಯುವ ನೀರಿನ ಕಾಮಗಾರಿಗೆ ಹಾಗೂ ಬೋರ್‌ವೆಲ್‌ಗೆ ಮೋಟಾರ್ ಹಾಗೂ ಪೈಪ್‌ಲೈನ್ ಅಳವಡಿಕೆಗೆ ಮೂರು ಲಕ್ಷ ರೂಪಾಯಿ ವಿನಿಯೋಗವಾಗಿದೆ ಎಂದು ಉಪಾಧ್ಯಕ್ಷೆ ಜಯಾ ಮುರುಗೇಶ್ ಹೇಳಿಕೆ ನೀಡಿದ್ದಾರೆ. ಮಂಜು ಪೆರಿಯಾಸ್ವಾಮಿ ಅವರ ಮನೆ ಮುಂಭಾಗದ ರಸ್ತೆಗೆ ಐವತ್ತು ಸಾವಿರ ರೂ. ಕಾಮಗಾರಿಯಾಗಿದೆ ಎಂದು ತಿಳಿಸಿದ್ದಾರೆ. ಆದರೆ ಈ ಕಾಮಗಾರಿ ಪೂರ್ಣಗೊಳಿಸದಿದ್ದರಿಂದ ರಸ್ತೆ ಕೆಸರುಮಯವಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿ ಆರೋಪಿಸಿದರು.

ಜಲದುರ್ಗದ ರುದ್ರಭೂಮಿಯಲ್ಲಿ ರಾತ್ರಿ ಸಂದರ್ಭದಲ್ಲಿ ಅಂತ್ಯಸಂಸ್ಕಾರ ಮಾಡಲು ಬೆಳಕಿನ ವ್ಯವಸ್ಥೆ ಇಲ್ಲದೆ ತೊಂದರೆಯಾಗಿದ್ದು, ಇದಕ್ಕೆ ಸೋಲಾರ್ ದೀಪ ನೀಡುವಂತೆ ಅನೇಕ ಬಾರಿ ಕೇಳಿದ್ದರೂ ಪ್ರಯೋಜನವಾಗಿಲ್ಲ. ಜಲದುರ್ಗದ ಚಿಕ್ಕಮಗಳೂರು-ಶೃಂಗೇರಿ ಮುಖ್ಯರಸ್ತೆಯಲ್ಲಿ ಗಿಡದ ಹೆರೆಗಳು ರಸ್ತೆಗೆ ಬಾಗಿದ್ದು ಸಾರ್ವಜನಿಕರು ನಡೆದುಕೊಂಡು ಹೋಗುವುದು ಕಷ್ಟಸಾಧ್ಯವಾಗಿದೆ. ಚರಂಡಿ ಸಂಪೂರ್ಣ ಮುಚ್ಚಿಹೋಗಿದ್ದು, ಗುಡ್ಡದಿಂದ ಬರುವ ನೀರು ರಸ್ತೆಯಲ್ಲಿ ನಿಲ್ಲುತ್ತಿದೆ. ಆದ್ದರಿಂದ ಸಾರ್ವಜನಿಕರಿಗೆ ತಿರುಗಾಡುವುದು ಕಷ್ಟ ಸಾಧ್ಯವಾಗಿದೆ. ಪಂಚಾಯಿತಿ ತಕ್ಷಣವೇ ಚರಂಡಿ ಸ್ವಚ್ಛಗೊಳಿಸಬೇಕು ಎಂದು ಆಗ್ರಹಿಸಿದರು.

ಜಲದುರ್ಗ ಕಾಂಗ್ರೆಸ್ ಬೂತ್ ಕಾರ್ಯದರ್ಶಿ ಪಿ.ಸಂದೀಪ್, ಗ್ರಾಮಸ್ಥರಾದ ಮಗ್ದುಂ, ಅಭಿಷೇಕ್, ಶಶಿಕುಮಾರ್, ಪ್ರಶಾಂತ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net