ಜಲಜೀವನ್ ಮಿಷನ್ ಕಾಮಗಾರಿ ತ್ವರಿತಕ್ಕೆ ಸಿಇಒ ತಾಕೀತು

CTD CEO PRAGATI....
Published on

ಚಿತ್ರದುರ್ಗ: ಜಲಜೀವನ್ ಮಿಷನ್ ಅಡಿ ಜಿಲ್ಲೆಯಲ್ಲಿ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಕಾಲಮಿತಿಯೊಳಗೆ ತುರ್ತಾಗಿ ಪೂರ್ಣಗೊಳಿಸಬೇಕೆ ಂದು ಜಿಪಂ ಸಿಇಒ ಎಸ್.ಜೆ.ಸೋಮಶೇಖರ್ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಜಿಲ್ಲಾ ಪಂಚಾಯಿತಿಯಲ್ಲಿ ಗುರುವಾರ ಜಲಜೀವನ್ ಹಾಗೂ ಸ್ವಚ್ಛ ಭಾರತ್ ಮಿಷನ್‌ಗಳಡಿ ಕೈಗೊಂಡಿರುವ ಕಾಮಗಾರಿಗಳ(ಗ್ರಾ)ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

ಜಿಲ್ಲೆಯ ಆರು ತಾಲೂಕುಗಳಲ್ಲಿ ಆದ್ಯತೆ ಮೇರೆಗೆ ಮನೆ, ಮನೆಗೆ ಗಂಗೆ ಹಾಗೂ 128 ಶಾಲಾ ಮತ್ತು ಅಂಗನವಾಡಿ ಕೇಂದ್ರಗಳಿಗೆ ಹಾಗೂ 199 ಆಯುಷ್ಮಾನ್ ಆರೋಗ್ಯ ಕೇಂದ್ರಗಳಿಗೆ ಹತ್ತು ದಿನದೊಳಗೆ ನಲ್ಲಿ ನೀರಿನ ಸಂಪರ್ಕ ಕಲ್ಪಿಸುವಂತೆ ಗಡುವು ವಿಧಿಸಿದರು.

ಕಾರ‌್ಯಾದೇಶ ನೀಡಿದರೂ ಈವರೆಗೂ ಮನೆ, ಮನೆಗೆ ಗಂಗೆ ಕಾಮಗಾರಿ ಪ್ರಾರಂಭಿಸದ ಗುತ್ತಿಗೆದಾರರ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚಿಸಿದರು. ಗ್ರಾಪಂಗಳಲ್ಲಿ ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿ ರಚಿಸಬೇಕು. ಗ್ರಾಮ ನೀರು ನೈರ್ಮಲ್ಯ ಸಮಿತಿ ಬ್ಯಾಂಕ್ ಖಾತೆಗಳನ್ನು ಕಡ್ಡಾಯವಾಗಿ ಪ್ರಾರಂಭಿಸಬೇಕು. ಸ್ವಚ್ಛ ಭಾರತ್ ಯೋಜನೆಯ ಬೂದು ನೀರು ನಿರ್ವಹಣೆ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಹಾಗೂ ಜಲ ಜೀವನ್‌ಮಿಷನ್ ಅಡಿ ಕೈಗೊಂಡ ಮಾಹಿತಿ ನಾಮಫಲಕಗಳನ್ನು ತುರ್ತಾಗಿ ಅಳವಡಿಸಬೇಕು ಎಂದರು.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಇಇ ಬಸವನಗೌಡ ಪಾಟೀಲ್, ವಿವಿಧ ತಾಲೂಕುಗಳ ಎಇಗಳಾದ ಹಸನ್‌ಪಾಷ, ದಯಾನಂದಸ್ವಾಮಿ, ಧನಂಜಯ್, ಹರಿಶ್ಚಂದ್ರ, ದಿಗಂಬರ್ ಕಾಂಬಳೆ, ಶಿವಮೂರ್ತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಭಾರತಿ ಆರ್.ಬಣಕಾರ್, ಜಿಲ್ಲಾನಿರೂಪಣಾಧಿಕಾರಿ ವಿಜಯಕುಮಾರ್ ಮತ್ತಿತರ ಅಧಿಕಾರಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net