

ಸಂತೋಷ ದೇಶಪಾಂಡೆ ಬಾಗಲಕೋಟೆ:
ಸಾಹೇಬ್ರ ನೋಡರಿ ನಮ್ಮ ಬದುಕು ಮಳೆ ಆದರು ಸುಖ ಇಲ್ಲ. ಬಿಟ್ಟರು ಸುಖ ಇಲ್ಲ. ಸಣ್ಣ ಸಣ್ಣ ಮಕ್ಕಳನ್ನು ಕರೆಕೊಂಡ ಜೀವನಾ ನಡೆಸುದಂದ್ರ ಹೆಂಗ ಹೇಳ್ರಿ. ನಾಲ್ಕೈದು ವರ್ಷ ಆತು ಬರೀ ಬರ, ಜಂಜಾಟದಾಗ ಕಳೆಯೋದು ಆಗೈತ್ರೀ. ನೀರು(ಜಲ) ಕಂಡರ ಜೀವ ಝಲ್ ಎನ್ನುತ್ತೆ ಸಾಹೇಬ್ರ…!!!
ಜಿಲ್ಲೆಯ ಜೀವ ನದಿ ಘಟಪ್ರಭೆ ರುದ್ರ ನರ್ತನಕ್ಕೆ ತತ್ತರಿಸುವ ನದಿ ತೀರದ ಜನರ ಕಣ್ಣೀರಿನ ನುಡಿಗಳಿವು. ಪ್ರವಾಹ, ಬರಗಾರಲ ಅಕ್ಷರಶಃ ಜನರ ಜೀವನ ಘಾಸಿಗೊಳಿಸಿದೆ. ಪ್ರತಿ ಕಣ್ಣಂಚಿನಲ್ಲಿ ಭರವಸೆ, ಆಸೆಯ ಮೇಲೆ ಕಾರ್ಮೋಡ ಆವರಿಸಿದೆ. ಮನೆ, ಮಠ, ಜಮೀನು ಆಹುತಿ ಪಡೆಯುತ್ತಿರುವ ಜೀವನದೆ ಬಗ್ಗೆ ಒಡಲಾಳ ನೋವು ಮಡುಗಟ್ಟುವಂತೆ ಮಾಡಿದೆ. ಇದಕ್ಕೆ ಕೊನೆ ಹಾಡಿ, ಶಾಶ್ವತ ಪರಿಹಾರ ಕಲ್ಪಿಸಿ ಅಂತ ಸಂತ್ರಸ್ತರು ಸರ್ಕಾರಕ್ಕೆ ಮನವಿ ಮಾಡುತ್ತಿದ್ದಾರೆ.
ಜಿಲ್ಲೆಯಲ್ಲಿ ಭಾರಿ ಪ್ರಮಾಣದಲ್ಲಿ ಮಳೆ ಇಲ್ಲ. ಆದರು ಪ್ರವಾಹ ಎನ್ನುವುದು ಗಾಯದ ಮೇಲೆ ಬರೆ ಎಳೆಯ ತೊಡಗಿದೆ. ಮಹಾರಾಷ್ಟ್ರ, ಬೆಳಗಾವಿ ಪಶ್ಚಿಮ ಘಟದಲ್ಲಿ ಸುರಿಸುತ್ತಿರುವ ಮಳೆಗೆ ಘಟಪ್ರಭಾ ನದಿ ಉಕ್ಕಿ ಹರಿಯುತ್ತಿರುವ ಪರಿಣಾಮ ನದಿ ಪಕ್ಕದ ಗ್ರಾಮಸ್ಥರು ಜೀವ ಕೈ ಯಲ್ಲಿ ಹಿಡಿದುಕೊಂಡು ಬದುಕುವಂತಾಗಿದೆ.
ಮಕ್ಕಳ ಶಿಕ್ಷಣದ ಚಿಂತೆ..
೨೦೧೯ ಪ್ರವಾಹದ ನೋವು ಇಂದಿಗೂ ಇಲ್ಲಿನ ಜನ ಮರೆತಿಲ್ಲ. ೨೦೨೨ ವರೆಗೆ ಆದ ಡ್ಯಾಮೇಜ್ ಇಂದಿಗೂ ಕಣ್ಣು ಮುಂದೆ ಇದೆ. ಇದೀಗ ಮತ್ತೆ ನದಿ ಪ್ರವಾಹದ ರೌದ್ರಾವತಾರಕ್ಕೆ ತಾಳಿರುವುದು ಸಂತ್ರಸ್ತರನ್ನು ಕಂಗಾಲಾಗಿದೆ. ಕೋವಿಡ್, ಪ್ರವಾಹದಂತಹ ವಿಕೋಪದಿಂದ ಮಕ್ಕಳ ಶಿಕ್ಷಣಕ್ಕೂ ಕುತ್ತು ತಂದು ಇಟ್ಟಿದೆ. ಅವುಗಳ ಭವಿಷ್ಯ ಏನು ಅಂತ? ಸದಾ ಕಾಡುತ್ತಲಿದೆ. ತಮ್ಮದೇನು ಬದುಕು ಮುಗಿತು ಬೆಳೆಯುವ ಮಕ್ಕಳು ಶಿಕ್ಷಣ ಹಿಂಗ ಆದರು ಹೇಗೆ ಅಂತ ಗೋಳಿಡುತ್ತಿದ್ದಾರೆ.
ಬಿತ್ತಿದ ಬೆಳೆ ಕೈ ಸೇರಿತಿಲ್ಲ:
ಸಾಲ, ಶೂಲ ಮಾಡಿ ಕಬ್ಬು, ಗೋಽ, ಜೋಳ ಇತ್ಯಾದಿ ಬೆಳೆದಿವಿ. ಕಾದು ಕಾದು ಸುಸ್ತಾದರು ಮಳೆರಾಯ ಸ್ವಲ್ಪವು ಕರುಣೆ ತೋರುವದಿಲ್ಲ. ಭೂಮಿ ಒಳಗ ಸೇರಿದ ಬೀಜ ಚಿಗರೊಡೆಯುವದಿಲ್ಲ. ಈ ಸಾರಿ ಮತ್ತೆ ಒಡುವೆಯಲ್ಲ ಒತ್ತೆ ಇಟ್ಟು ಬೆಳೆದೇವಿ. ಆದರು ಸಹ ಪ್ರವಾಹ ಬಂದು ಬೆಳೆಗಳನ್ನು ನುಂಗಿ ಹಾಕಿ ಬಿಟ್ಟಿದೆ. ಬಿತ್ತಿದ ಬೆಳೆಗಳು ಕೈ ಸೇರುತ್ತಿಲ್ಲ ಅಂತ `ವಿಜಯವಾಣಿ' ಎದುರು ಸಂತ್ರಸ್ತರು ಅಳಲು ತೋಡಿಕೊಂಡರು.
ಘಟಪ್ರಭಾ ನದಿಯ ನಂಬಿ ನೂರಾರು ವರ್ಷಗಳಿಂದ ಬದುಕುತ್ತಿರುವ ಮುಧೋಳ ತಾಲೂಕಿನ ಮಳಲಿ, ಮಿರ್ಜಿ, ಒಂಟಗೂಡಿ, ಮಾಚಕನೂರ, ಮುಧೋಳ ನಗರದ ಜನತೆಯ ತೀವ್ರ ಸಂಕಷ್ಟ ಜರ್ಜರಿತರನ್ನಾಗಿ ಮಾಡಿದೆ. ವೋಟು ತೆಗೆದುಕೊಳ್ಳುವಾಗ ಬರುವ ಜನ ಆಮೇಲೆ ಭರವಸೆ ಕೊಟ್ಟು ಸುಮ್ಮನಾಗುತ್ತಾರೆ. ನಮಗೆ ಆಸರೆಯಾಗುತ್ತಾರೆ ಎನ್ನುವ ನಂಬಿಕೆ ಹೊರಟು ಹೋಗಿದೆ ಎನ್ನುತ್ತಾರೆ ನದಿ ತೀರದ ಜನರು.