ಜಲ ಸಂಜೀವಿನಿ ಅನುಷ್ಠಾನಕ್ಕೆ ಕ್ರಿಯಾ ಯೋಜನೆ

25 Raju 1
Published on

ಚಾಮರಾಜನಗರ: ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಜಲ ಸಂಜೀವಿನಿ ಯೋಜನೆ ಅನುಷ್ಠಾನಕ್ಕಾಗಿ ಕ್ರಿಯಾಯೋಜನೆ ತಯಾರಿಸಲಾಗುತ್ತಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಕೆ.ಎಂ.ಗಾಯತ್ರಿ ತಿಳಿಸಿದರು.

ರಾಷ್ಟ್ರೀಯ ರೈತ ದಿನಾಚರಣೆ ಅಂಗವಾಗಿ ತಾಲೂಕಿನ ಶಿವಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಡಪುರ ಗ್ರಾಮದ ಸುತ್ತುಕಟ್ಟೆ ಅಭಿವೃದ್ಧಿ ಅಮೃತ ಸರೋವರ ಕಾಮಗಾರಿ ಸ್ಥಳದಲ್ಲಿ ಶುಕ್ರವಾರ ಆಯೋಜಿಸಿದ್ದ ಜಲಸಂಜೀವಿನಿ ರೈತರೊಂದಿಗೆ ಸಂವಾದ (ನಮ್ಮ ನಡಿಗೆ ಅನ್ನದಾತನ ಕಡೆಗೆ) ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ರೈತರ ಸುಸ್ಥಿರ ಬದುಕಿಗೆ ಪೂರಕವಾಗಿ ಜಿಲ್ಲಾ ಪಂಚಾಯಿತಿಯಿಂದ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ರೈತರು ಯೋಜನೆಯ ಸದ್ಭಳಕೆ ಮಾಡಿಕೊಳ್ಳಬೇಕು. ಜಲಸಂಜೀವಿನಿ ಕ್ರಿಯಾಯೋಜನೆ ತನ್ನದೇ ಆದ ವೈಶಿಷ್ಟ್ಯತೆ ಹೊಂದಿದ್ದು ಜಿಯೋ ಸ್ಪೇಷಿಯಲ್ ತಂತ್ರಜ್ಞಾನದ ನೆರವಿನೊಂದಿಗೆ ಕ್ರಿಯಾ ಯೋಜನೆ ಸಿದ್ಧಪಡಿಸಲಾಗುತಿದ್ದು, ಕ್ಲಾರ್ಟ್ ಆ್ಯಪ್ ಮೂಲಕ ಸ್ಥಳಗಳನ್ನು ಗುರುತಿಸಿ ಭೌಗೋಳಿಕ ಸನ್ನಿವೇಶಗಳನ್ನು ಅರಿತು ಯೋಜನೆ ರೂಪಿಸಲಾಗುತ್ತದೆ ಎಂದರು.

ಕೆರೆಗಳ ಸಂರಕ್ಷಣೆ ಉದ್ದೇಶದಿಂದ ಅಮೃತ ಸರೋವರ ಶೀರ್ಷಿಕೆಯಡಿ 75 ಕೆರೆಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ನರೇಗಾ ಯೋಜನೆಯಡಿ ಕೈಗೊಳ್ಳುವ ಕಾಮಗಾರಿಗಳಿಗೆ ಭರಿಸುವ ಒಟ್ಟು ವೆಚ್ಚದ ಕನಿಷ್ಠ ಶೇ.65ರಷ್ಟು ವೆಚ್ಚವನ್ನು ನೈಸರ್ಗಿಕ ಸಂಪನ್ಮೂಲ ನಿರ್ವಹಣೆ ಆಧಾರಿತ ಕಾಮಗಾರಿಗಳ ಅನುಷ್ಠಾನಕ್ಕೆ ಭರಿಸಬೇಕೆಂಬ ನಿಯಮವಿದ್ದು, ಈ ಕಾಮಗಾರಿಗಳನ್ನು ಕೈಗೊಳ್ಳುವ ಮುನ್ನ ವೈಜ್ಞಾನಿಕವಾಗಿ ಕ್ರಿಯಾಯೋಜನೆ ರೂಪಿಸುವುದು ಬಹುಮುಖ್ಯವಾಗುತ್ತದೆ ಎಂದು ಹೇಳಿದರು.

ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪೂರ್ಣಿಮಾ, ಶಿವಪುರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಹೆಸರು ಇದ್ದರೆ ಸೇರಿಸಿಕೊಳ್ಳಿ ರೈತ ಮುಖಂಡರು, ಸಾರ್ವಜನಿಕರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net