ಜಲ ಸಂಗ್ರಹಗಾರಗಳ ಸ್ವಚ್ಛತೆ

HLK TANK 06
Published on

ಹೊಳಲ್ಕೆರೆ: ಕವಾಡಿಗರ ಹಟ್ಟಿಯಲ್ಲಿ ಕಲುಷಿತ ನೀರು ಸೇವನೆ ಪ್ರಕರಣ ಬಳಿಕ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ನೀರು ಸರಬರಾಜು ಮಾಡುವ ಇಲಾಖೆಗಳಿಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಕಟ್ಟುನಿಟ್ಟಿನ ಆದೇಶ ಹೊರಡಸಿದೆ.
ಅದರಂತೆ ಹೊಳಲ್ಕೆರೆ ಪುರಸಭೆ ವತಿಯಿಂದ ಪಟ್ಟಣದಲ್ಲಿ ಸರಬರಾಜಾಗುವ ನೀರನ್ನು ಪ್ರತಿಯೊಂದು ಹಂತದಲ್ಲೂ ಪರೀಕ್ಷಿಸಿ ಬಿಡುವಂತೆ ಸಿಬ್ಬಂದಿಗೆ ಸೂಚಿಸಲಾಗಿದೆ.
ಪುರಸಭೆ ಆಡಳಿತಾಕಾರಿ ಎಂ.ಕಾರ್ತಿಕ್ ಮಾತನಾಡಿ, ಜಿಲ್ಲಾಧಿಕಾರಿಗಳು, ಯೋಜನಾ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ಧಿ ಕೋಶ ಚಿತ್ರದುರ್ಗ ಅವರ ಆದೇಶದ ಮೇರೆಗೆ ಪುರಸಭೆಯ ಸರ್ವ ಸದಸ್ಯರ ಸಹಕಾರದೊಂದಿಗೆ ಪಟ್ಟಣದಲ್ಲಿ ಶುದ್ಧ ನೀರು ಸರಬರಾಜಿಗೆ ಮೊದಲಿಗಿಂತ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಪಟ್ಟಣದಲ್ಲಿರುವ 4 ದೊಡ್ಡ ಹಾಗೂ 3 ಸಣ್ಣ ಜಲ ಸಂಗ್ರಹಗಾರಗಳ ಪೈಕಿ ದಿನನಿತ್ಯ ಒಂದೊಂದು ಜಲಸಂಗ್ರಹಗಾರ ಸ್ವಚ್ಛಗೊಳಿಸುವ ಕೆಲಸ ಪ್ರಗತಿಯಲ್ಲಿದೆ. ಟ್ಯಾಂಕ್ ಸುತ್ತ ಬೆಳೆದಿರುವ ಗಿಡ ಗಂಟಿ ಸ್ವಚ್ಛಗೊಳಿಸಲಾಗುತ್ತಿದೆ. ನೀರಿನ ಮಾದರಿ ಸಂಗ್ರಹಿಸಿ ಸಕ್ಷಮ ಪರೀಕ್ಷಾ ಕೇಂದ್ರಗಳಿಂದ ಪರೀಕ್ಷಿಸಿಕೊಳ್ಳಲಾಗುತ್ತಿದೆ. ಕುಡಿಯುವ ನೀರಿನಲ್ಲಿ ಕಲುಷಿತ ನೀರು ಬೆರೆಯದ ಹಾಗೆ ಎಲ್ಲ ಪೈಪ್‌ಲೈನ್ ಸರಿಪಡಿಸಿ ವಾರ್ಡ್‌ಗಳಲ್ಲಿರುವ ಸಣ್ಣ, ಸಣ್ಣ ನೀರಿನ ಟ್ಯಾಂಕ್ ಸ್ವಚ್ಛಗೊಳಿಸಲಾಗುತ್ತಿದೆ ಎಂದರು.
ಪುರಸಭೆಯ ವ್ಯಾಪ್ತಿಯಲ್ಲಿರುವ ಎಲ್ಲ ವಾರ್ಡ್‌ಗಳಿಗೆ ಶಾಂತಿಸಾಗರದಿಂದ ಕುಡಿಯುವ ನೀರು ಪೂರೈಕೆ ಆಗುತ್ತಿದೆ. ಕೆಲವೆಡೆ ಕೊಳವೆ ಬಾವಿಗಳಿಂದ ಕುಡಿಯಲು ನೀರು ಪೂರೈಕೆ ಆಗುತ್ತಿದೆ. ಪುರಸಭೆಯ ಶುದ್ಧ ನೀರಿನ ಘಟಕಗಳು ಇವೆ. ಮಳೆಗಾಲದ ಹಿನ್ನೆಲೆಯಲ್ಲಿ ಶಾಂತಿ ಸಾಗರದ ನೀರು ಕಲುಷಿತವಾಗುತ್ತಿದ್ದು, ನೀರಿನಲ್ಲಿ ಕೊಳಚೆ ಸೇರುವ ಸಾಧ್ಯತೆ ಇದೆ. ಹೀಗಾಗಿ ಪುರಸಭೆ ವ್ಯಾಪ್ತಿಯಲ್ಲಿರುವ ಎಲ್ಲ ಟ್ಯಾಂಕ್‌ಗಳನ್ನು ರಾಸಾಯನಿಕ ಬಳಸಿ ಸ್ವಚ್ಛಗೊಳಿಸಲಾಗುತ್ತಿದೆ ಎಂದರು.
ಮುಖ್ಯಾಧಿಕಾರಿ ಎ.ವಾಸಿಂ ಮಾತನಾಡಿ, ಜಿಲ್ಲಾಧಿಕಾರಿ ಆದೇಶದಂತೆ ಪುರಸಭೆ ವ್ಯಾಪ್ತಿಯಲ್ಲಿರುವ ಎಲ್ಲ ಟ್ಯಾಂಕ್ ಹಾಗೂ ಮಿನಿ ನೀರು ಸರಬರಾಜು ಘಟಕ ಪರಿಶೀಲಿಸಲಾಗಿದೆ. ಪುರಸಭೆ ಸಿಬ್ಬಂದಿ ಮೂಲಕ ಸ್ವಚ್ಛಗೊಳಿಸುತ್ತಿದ್ದೇವೆ. ಶುದ್ಧ ಕುಡಿಯುವ ನೀರಿನ ಪೂರೈಕೆಗೆ ಒತ್ತು ನೀಡಿದ್ದೇವೆ. ಕಳೆದ ಎರಡು ದಿನಗಳಿಂದ ಪಟ್ಟಣದ ವ್ಯಾಪ್ತಿಯಲ್ಲಿರುವ ಎಲ್ಲ ನೀರಿನ ಘಟಕಗಳನ್ನು ಈಗಾಗಲೇ ಶುದ್ಧ ಮಾಡಲಾಗಿದೆ ಎಂದರು.
ಪುರಸಭೆ ಆಡಳಿತಾಕಾರಿ ಎಂ. ಕಾರ್ತಿಕ್ ಮಾತನಾಡಿ, ಪುರಸಭೆಯ ಸರ್ವ ಸದಸ್ಯರ ಸಹಕಾರದೊಂದಿಗೆ ಸಾರ್ವಜನಿಕರಿಗೆ ಸ್ವಚ್ಛ ಹಾಗೂ ಸುರಕ್ಷಿತ ನೀರು ಸರಬರಾಜು ಮಾಡುವುದು ಪುರಸಭೆಯ ಆದ್ಯ ಕರ್ತವ್ಯವಾಗಿದ್ದು, ಕುಡಿಯುವ ನೀರಿನ ಗುಣಮಟ್ಟವನ್ನು ಕಾಯ್ದುಕೊಳ್ಳಲಾಗುವುದು ಎಂದು ತಿಳಿಸಿದರು.
ಪುರಸಭೆ ಸದಸ್ಯರಾದ ವಿಜಯಸಿಂಹ ಖಾಟ್ರೋತ್, ಎಚ್.ಆರ್.ನಾಗರತ್ನ ವೇದಮೂರ್ತಿ, ಸೈಯದ್ ಸಜೀಲ್, ಸೈಯದ್ ಮನ್ಸೂರ್, ನೀರಿನ ಟ್ಯಾಂಕ್‌ಗಳ ಸ್ವಚ್ಛತೆ ವೇಳೆ ಆರೋಗ್ಯಾಧಿಕಾರಿ ಶೌಕತ್, ನೀರುಗಂಟಿ ರಂಗಸ್ವಾಮಿ, ಸ್ವಾಮಿ, ರತ್ನಮ್ಮ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net