ಜಲ ಸಂಗ್ರಹಗಾರ ನಿರ್ಮಾಣ ಕೈಬಿಡಲು ಆಗ್ರಹ

15 a
Published on

ಮೈಸೂರು: ತಿಲಕ್‌ನಗರದ ಅಂಧ ಹಾಗೂ ಶ್ರವಣದೋಷವುಳ್ಳ ಮಕ್ಕಳ ಸರ್ಕಾರಿ ವಸತಿಯುತ ಶಾಲಾ ಆವರಣದಲ್ಲಿ ಬೃಹತ್ ಜಲ ಸಂಗ್ರಹಗಾರ ನಿರ್ಮಾಣ ಕೈ ಬಿಡುವಂತೆ ಒತ್ತಾಯಿಸಿ ಕರ್ನಾಟಕ ಅಂಧರ ಸಂಘದಿಂದ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು.
ಜಿಲ್ಲಾಧಿಕಾರಿ ಕಚೇರಿ ಬಳಿ ಧರಣಿ ನಡೆಸಿದ ಪ್ರತಿಭಟನಾಕಾರರು, ಅಂಧರು, ಶ್ರವಣದೋಷವುಳ್ಳವರಿಗಾಗಿ ಮೀಸಲಾದ ಜಾಗದಲ್ಲಿ ಜಲ ಸಂಗ್ರಹಾರ ಮಾಡುತ್ತಿರುವುದರಿಂದ ಓಡಾಡಲು ತೊಂದರೆ ಆಗುತ್ತಿದೆ. ಆದ್ದರಿಂದ, ತಕ್ಷಣ ಕಾಮಗಾರಿ ನಿಲ್ಲಿಸುವಂತೆ ಒತ್ತಾಯಿಸಲಾಯಿತು. ಶಾಲೆಗಾಗಿ 1901ರಲ್ಲಿ ಅಂದಿನ ಮೈಸೂರು ಮಹಾರಾಣಿ ಅವರು 8.5 ಎಕರೆ ಜಾಗವನ್ನು ದೇಣಿಗೆಯಾಗಿ ನೀಡಿದ್ದರು. ಆದರೆ, 2022-23ನೇ ಸಾಲಿನಲ್ಲಿ ಈ ಐತಿಹಾಸಿಕ ಸ್ಥಳವನ್ನು 10 ಲಕ್ಷ ಲೀಟರ್ ಸಾಮರ್ಥ್ಯದ ಬೃಹತ್ ಜಲ ಸಂಗ್ರಹಗಾರ ನಿರ್ಮಿಸಲು ಬಳಸಿಕೊಳ್ಳಲಾಗುತ್ತಿದೆ. ಜಲ ಸಂಗ್ರಹಗಾರ ನಿರ್ಮಾಣಗೊಂಡರೆ ಅಂಧರು ಓಡಾಡಲು ತೊಂದರೆಯಾಗುತ್ತದೆ ಎಂದು ದೂರಿದರು.
ಉದ್ದೇಶಿತ ಸ್ಥಳದಲ್ಲಿ ಅಂಗವಿಕಲರ ಶೈಕ್ಷಣಿಕ ಸಂಸ್ಥೆಗಳನ್ನು ನಿರ್ಮಾಣ ಮಾಡಲು ಖಾಲಿ ಜಾಗದ ಅವಶ್ಯಕತೆ ಇದೆ. ಇಲ್ಲಿ ಅಂಧರ ಮತ್ತು ಶ್ರವಣದೋಷವುಳ್ಳವರ ವಿಶೇಷ ಬಿ.ಇಡಿ, ಎಂ.ಎಡ್ ಕಾಲೇಜುಗಳು ಬ್ರೈಲ್ ಮತ್ತು ಮಾತನಾಡುವ ಗ್ರಂಥಾಲಯ, ಅಂಗವಿಕಲ ಸ್ನೇಹಿ ಪಾರ್ಕ್ ನಿರ್ಮಿಸಬೇಕಾಗಿದೆ. ಆದ್ದರಿಂದ ಈ ಸ್ಥಳದಲ್ಲಿ ಪ್ರಗತಿಯಲ್ಲಿರುವ ಸಾರ್ವಜನಿಕ ಬೃಹತ್ ಜಲ ಸಂಗ್ರಹಗಾರವನ್ನು ಸ್ಥಳಾಂತರ ಮಾಡಬೇಕು. ಕಾಮಗಾರಿ ಉದ್ದೇಶಕ್ಕಾಗಿ ನಾಶ ಮಾಡಲ್ಪಟ್ಟ ಕಾಂಪೌಂಡ್ ಗೋಡೆ ಮರು ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಪದಾಧಿಕಾರಿಗಳಾದ ಶ್ರೀನಿವಾಸ್, ಸುರೇಶ್, ಸತೀಶ್, ನಾಗೇಶ್, ಮಾರುತಿ, ನಾಗರಾಜು, ಯೊಗೇಂದ್ರ ಸ್ವಾಮಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net