

ಹುಬ್ಬಳ್ಳಿ: ಹೆರಿಗೆ ಸಲುವಾಗಿ ಭಾರತಕ್ಕೆ ಬರಲು ಹಾತೊರೆಯುತ್ತಿದ್ದ ಅನಿವಾಸಿ ಭಾರತೀಯಳ ಸುರಕ್ಷಿತ ಪ್ರಯಾಣಕ್ಕೆ ನೆರವಾಗುವ ಮೂಲಕ ಕೇಂದ್ರ ಸಚಿವರು ವಿಶೇಷ ಕಾಳಜಿ ಮೆರೆದಿದ್ದಾರೆ.
ಹುಬ್ಬಳ್ಳಿಯ ವಾಣಿಜ್ಯೋದ್ಯಮ ಸಂಸ್ಥೆಯ ಮಾಜಿ ಅಧ್ಯಕ್ಷ, ಅಳ್ನಾವರದ ಎಂ.ಸಿ. ಹಿರೇಮಠ ಅವರ ಪುತ್ರಿ ವಿಜೇತಾ ಹಾಗೂ ಮೊಮ್ಮಗಳು ನವ್ಯಾ ತಾಯ್ನಾಡಿಗೆ ಬಂದ ಖುಷಿ ಕುಟುಂಬ ವರ್ಗದ ಮೊಗದಲ್ಲಿ ಮಂದಹಾಸ ಮೂಡಿಸಿದೆ.
ಮೇ 30ರಂದು ಮಧ್ಯಾಹ್ನ 3ಕ್ಕೆ ಇವರಿಬ್ಬರು ಬೆಂಗಳೂರಿಗೆ ಬಂದು ಇಳಿದಿದ್ದಾರೆ. ಸಕಾಲದಲ್ಲಿ ಸಹಾಯಕ್ಕೆ ಬಂದ ಕೇಂದ್ರ ಸಚಿವ ಜೋಶಿ ಅವರಿಗೆ ಈ ಕುಟುಂಬ ವರ್ಗ ಕೃತಜ್ಞತೆ ಸಲ್ಲಿಸಿದೆ.
ವಿಜೇತಾ ಪುತ್ರಿಯೊಂದಿಗೆ ಭಾರತಕ್ಕೆ ಬರಲು ಮಾರ್ಚ್ 20ರಂದೇ ವಿಮಾನ ಟಿಕೆಟ್ ಕಾಯ್ದಿರಿಸಿದ್ದರು. ಅಷ್ಟರಲ್ಲಿ ಕರೊನಾ ಹಾವಳಿ ಆರಂಭವಾಯಿತು. ದಿಕ್ಕು ತೋಚದೇ ಕೊನೆಗೆ ಕೇಂದ್ರ ಸಚಿವ ಜೋಶಿ ಅವರನ್ನು ಸಂರ್ಪಸಿದ ಹಿರೇಮಠ ಕುಟುಂಬದವರಿಗೆ ಹೊಸ ಭರವಸೆ ಸಿಕ್ಕಂತಾಯಿತು. ಜೋಶಿ ಅವರ ಪ್ರಯತ್ನದ ಫಲವಾಗಿ ಜರ್ಮನಿಯಿಂದ ಪ್ರಥಮ ವಿಮಾನ ಹಾರಾಟಕ್ಕೆ ಸಜ್ಜಾಗಿತ್ತು. ಭಾರತೀಯ ದೂತಾವಾಸ ಬಿಡುಗಡೆ ಮಾಡಿದ ಜರ್ಮನಿಯಿಂದ ಭಾರತಕ್ಕೆ ಬರುವ ಪ್ರಥಮ ವಿಮಾನ ಯಾನದ ಪಟ್ಟಿಯಲ್ಲಿ ವಿಜೇತಾ ಮತ್ತು ಅವರ ಪುತ್ರಿ ನವ್ಯಾ ಹೆಸರು ಇತ್ತು.
ಜರ್ಮನಿಯಿಂದ ಮತ್ತೆ ನಾಲ್ಕೈದು ಗರ್ಭಿಣಿಯರು ಕೂಡ ಭಾರತಕ್ಕೆ ಮರಳಿ ಬಂದಿದ್ದಾರೆ. ಅವರೆಲ್ಲ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.