

ಹೊಸದುರ್ಗ: ಜಯಸುವರ್ಣಪುರಕ್ಕೂ ಮುರುಘಾಮಠಕ್ಕೂ ಅವಿನಾಭಾವ ಸಂಬಂಧವಿದೆ ಎಂದು ಶ್ರೀ ಮಠದ ಆಡಳಿತ ಮಂಡಳಿ ಸದಸ್ಯ ಡಾ.ಶ್ರೀ ಬಸವಕುಮಾರ ಸ್ವಾಮೀಜಿ ಹೇಳಿದರು.
ತಾಲೂಕಿನ ಜಯಸುವರ್ಣಪುರದಲ್ಲಿ ಶುಕ್ರವಾರ ಶ್ರೀ ಜಯಲಿಂಗೇಶ್ವರ ಸ್ವಾಮಿಯ ನೂತನ ದೇವಾಲಯ ಉದ್ಘಾಟನೆ ಹಾಗೂ ಶ್ರೀ ಜಗದ್ಗುರು ಜಯದೇವ ಮುರುಘರಾಜೇಂದ್ರ ಸ್ವಾಮೀಜಿ 150ನೇ ಜಯಂತ್ಯುತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿ, ತಿರುವನಾಳ್‌ಪಾಳ್ಯ ಗ್ರಾಮ ಜಯಸುವರ್ಣಪುರವಾಗಿದ್ದ ಐತಿಹ್ಯವನ್ನು ವಿವರಿಸಿದರು.
ಮುರುಘಾಮಠದ ಹಿಂದಿನ ಪೀಠಾಧಿಪತಿ ಶ್ರೀ ಜಯದೇವ ಮುರುಘರಾಜೇಂದ್ರ ಸ್ವಾಮೀಜಿ, ಗ್ರಾಮದಲ್ಲಿ ಮೊಕ್ಕಾಂ ಹೂಡಿ ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ನೀಡಿ, ಊರಿನಲ್ಲಿ ನೆಮ್ಮದಿ ನೆಲೆಸುವಂತೆ ಮಾಡಿದ್ದರಿಂದ ಇದಕ್ಕೆ ಜಯಸುವರ್ಣಪುರವೆಂಬ ಹೆಸರು ಬಂದಿದೆ. ಭಕ್ತರು ಹಿರಿಯ ಶ್ರೀಗಳ ನೆನಪಿಗಾಗಿ ಸುಂದರ ದೇವಾಲಯ ನಿರ್ಮಿಸಿರುವುದು ಶ್ಲಾಘನೀಯ ಎಂದರು.
ಸಾನ್ನಿಧ್ಯ ವಹಿಸಿದ್ದ ದಾವಣಗೆರೆ ವಿರಕ್ತ ಮಠದ ಡಾ.ಶ್ರೀ ಬಸವಪ್ರಭು ಸ್ವಾಮೀಜಿ ಮಾತನಾಡಿ, ದೇವಾಲಯ ನಿರ್ಮಾಣದ ಜತೆಗೆ ಜ ತೆಗೆ ಬದುಕನ್ನು ಕಟ್ಟಿಕೊಳ್ಳಬೇಕಿದೆ. ಕಾಯಕ ಮಾಡಬೇಕು, ಆದರಿಂದ ಬಂದ ಆದಾಯದಲ್ಲಿ ದಾಸೋಹ ಮಾಡಬೇಕು. ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡಬೇಕೆಂದರು.
ಸಾನ್ನಿಧ್ಯವಹಿದ್ದ ಪುಷ್ಪಗಿರಿ ಮಠದ ಡಾ.ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ದೇವಾಲಯ ನಿರ್ಮಿಸಿದ್ದು ಸಾರ್ಥಕವಾಗಬೇಕು ಎಂದಾದರೆ ಉತ್ತಮವಾದ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕೆಂದು ಭಕ್ತರಿಗೆ ಸಲಹೆ ನೀಡಿದರು.
ಜಯಲಿಂಗೇಶ್ವರ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದ ಎಂಎಲ್‌ಸಿ ಕೆ.ಎಸ್.ನವೀನ್, ಆಪರೇಷನ್ ಸಿಂಧೂರದಲ್ಲಿ ಭಾಗಿಯಾಗಿರುವ ಸೇನಾನಿಗಳಿಗೆ ಗೌರವ ಸಲ್ಲಿಸೋಣವೆಂದರು.
ನಿವೃತ್ತ ಜಿಲ್ಲಾಧಿಕಾರಿ ಶ್ರೀರಂಗಯ್ಯ ಮಾತನಾಡಿ, ಈ ಗ್ರಾಮ ದೇವರ ಆಶೀರ್ವಾದದಿಂದ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸುವ ಅವಕಾಶ ದೊರಕಿತ್ತು ಎಂದರು.
ನಿವೃತ್ತ ಐಪಿಎಸ್ ಅಧಿಕಾರಿ ಎಸ್.ಎನ್.ಸಿದ್ದರಾಮಪ್ಪ, ನಾನಾ ಜನಪ್ರತಿನಿಧಿಗಳು, ವಿವಿಧ ಕ್ಷೇತ್ರಗಳ ಮುಖಂಡರು, ನಾನಾ ಗ್ರಾಮಗಳ ಗ್ರಾಮಸ್ಥರು, ಭಕ್ತರು ಇದ್ದರು.
ಜಿ.ಜೆ.ಧನುಶ್ರೀ ಪ್ರಾರ್ಥಿಸಿದರು. ಜೆ.ಯು.ಸುಹಾಸ್ ಸ್ವಾಗತಿಸಿ, ಜೆ.ಎಸ್.ಅವಿನಾಶ್ ವಂದಿಸಿದರು. ಕಲಾವತಿ ಯೋಗೀಶ್ ಹಾಗೂ ಜೆ.ಸಿ.ರವಿಕುಮಾರ್ ನಿರೂಪಿಸಿದರು.
---
ಕೋಟ್
ಮನುಷ್ಯನ ಜನ್ಮ ದೊಡ್ಡದು. ದೇವಾಲಯಗಳಿಂದ ಧರ್ಮ, ಸಂಸ್ಕೃತಿಯೆಡೆ ಅರಿವು, ದೇವರಲ್ಲಿ ಭಕ್ತಿ, ನಂಬಿಕೆ ಹೆಚ್ಚುತ್ತದೆ. ಇಷ್ಟಲಿಂಗ ಧರಿಸಿ ಆಚಾರ ವಿಚಾರಗಳನ್ನು ಪಾಲಿಸಬೇಕು. ಮಕ್ಕಳಿಗೆ ಉತ್ತಮವಾದ ವಿದ್ಯಾಭ್ಯಾಸವನ್ನು ನೀಡಬೇಕು.
ಎಸ್.ಎನ್.ಸಿದ್ದರಾಮಪ್ಪ, ನಿವೃತ್ತ ಐಪಿಎಸ್ ಅಧಿಕಾರಿ.
----