ಜಯನಗರ ಪಶ್ಚಿಮ ಬಡಾವಣೆಯಲ್ಲಿ ಉದ್ಯಾನ ಒತ್ತುವರಿ ;  ಸಾರ್ವಜನಿಕ ಜಾಗದಲ್ಲಿ ಕಟ್ಟಡ ಕಟ್ಟಲು ಹುನ್ನಾರ ;  ಕ್ರಮ ಕೈಗೊಳ್ಳುವಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ

15TMK_Jayanagara_Park Encroachment 2
Published on

ತುಮಕೂರು : ನಗರದ ಜಯನಗರ ಪಶ್ಚಿಮ ಬಡಾವಣೆ 4ನೇ ಮುಖ್ಯರಸ್ತೆ, 5ನೇ ಎಡರಸ್ತೆ ಎದುರು ಸಾರ್ವಜನಿಕ ಪಾರ್ಕ್ ಅಭಿವೃದ್ಧಿಗಾಗಿ ಮೀಸಲಿರುವ ಉದ್ಯಾನ ಜಾಗದಲ್ಲಿ ಪ್ರಭಾವಿಯೊಬ್ಬರು ಅಕ್ರಮವಾಗಿ ಬೋರ್ ಹಾಕಿಸಿ, ಕಟ್ಟಡ ಕಟ್ಟಲು ಯತ್ನಿಸುತ್ತಿರುವ ಬಗ್ಗೆ ಪಾಲಿಕೆಗೆ ದೂರು ನೀಡಿದ್ದರೂ ಅಧಿಕಾರಿಗಳ ಜಾಣ ಮೌನ ಆಶ್ಚರ್ಯ ಮೂಡಿಸಿದೆ.

ಬಡಾವಣೆ ಅಭಿವೃದ್ಧಿ ಸಂದರ್ಭದಲ್ಲಿ ಇಲ್ಲಿನ ನಾಗರಿಕರ ವಿಹಾರಕ್ಕೆ ಅನುಕೂಲವಾಗಲು 18*250 ಅಡಿ ಉದ್ದದ ಜಾಗವನ್ನು 1994ರ ಏ.16ರಂದು ಟೂಡಾ ಆಯುಕ್ತರು ಪಾರ್ಕ್ ಉದ್ದೇಶಕ್ಕಾಗಿ ಮೀಸಲಿಟ್ಟಿದ್ದು, ಜತೆಗೆ ಸಿಡಿಪಿಯಲ್ಲಿಯೂ ಸ್ಪಷ್ಟವಾಗಿ ನಮೂದಿಸಲಾಗಿದೆ.

ಪಾಲಿಕೆ ವ್ಯಾಪ್ತಿಯಲ್ಲಿ 520 ಪಾರ್ಕ್‌ಗಳಿದ್ದರೂ ಬಹುತೇಕ ಪಾರ್ಕ್ ಎಲ್ಲಿವೆ ಎಂಬ ಬಗ್ಗೆ ದಾಖಲೆಗಳಿಲ್ಲ. ಪಾಲಿಕೆಯಲ್ಲಿ 360 ಪಾರ್ಕ್‌ಗಳ ದಾಖಲೆಗಳು ಲಭ್ಯವಿದೆ, ಜಿಐಎಸ್ ವಾಡದಿರುವುದರಿಂದ ಪಾರ್ಕ್ ಒತ್ತುವರಿ ಹಾಗೂ ನೆಲಗಳ್ಳರ ಹಾವಳಿ ಹೆಚ್ಚಾಗಿದೆ.

ಸಾರ್ವಜನಿಕರು ಹಾಗೂ ವನ್ಯಜೀವಿ ಜಾಗೃತಿ ನಿಸರ್ಗ ಸಂಸ್ಥೆಯಿಂದ ಪಾಲಿಕೆ ಆಯುಕ್ತರಿಗೆ ಪತ್ರ ವ್ಯವಹಾರ ವಾಡಿದರೂ ಕ್ರ್ರಮ ಕೈಗೊಳ್ಳದಿರುವುದು ಅನುವಾನಕ್ಕೆ ಎಡೆಮಾಡಿಕೊಟ್ಟಿದೆ. ಅಕ್ರಮ ಕಟ್ಟಡ ನಿರ್ವಾಣ ಕಾಮಗಾರಿ ನಿಲ್ಲಿಸಿ ಒತ್ತುವರಿದಾರರ ಮೇಲೆ ಕ್ರಮ ತೆಗೆದುಕೊಂಡು ಸಾರ್ವಜನಿಕರ ಆಸ್ತಿ ರಕ್ಷಿಸಬೇಕೆಂದು ನಿಸರ್ಗ ಸಂಸ್ಥೆ ಒತ್ತಾಯಿಸಿದೆ.

ಸಾರ್ವಜನಿಕ ಸ್ಥಳದಲ್ಲಿ ರಾಜಾರೋಷವಾಗಿಯೇ ಅಕ್ರಮವಾಗಿ ಕಟ್ಟಡ ಕಟ್ಟುತ್ತಿದ್ದರೂ ಅಧಿಕಾರಿಗಳು ಮೌನವಾಗಿದ್ದಾರೆ, ಈ ಬಗ್ಗೆ ಪಾಲಿಕೆಗೆ ಸಾರ್ವಜನಿಕರು ಪ್ರಶ್ನಿಸಿದರೆ ಸಂಸದ ಜಿ.ಎಸ್.ಬಸವರಾಜು ಹಿಂಬಾಲಕರು, ಆಪ್ತ ಸಹಾಯಕ ಎಂದು ಖಾಸಗಿ ವ್ಯಕ್ತಿ ಬೆದರಿಕೆ ಹಾಕುತ್ತಿದ್ದಾರೆ. ಸಾರ್ವಜನಿಕರು, ಅಧಿಕಾರಿಗಳ ಮೇಲೆ ದಬ್ಬಾಳಿಕೆ ನಡೆಸಿ ಕಟ್ಟಡ ನಿರ್ಮಿಸುತ್ತಿದ್ದಾರೆ. ಬಿ.ವಿ.ಗುಂಡಪ್ಪ ಅಧ್ಯಕ್ಷ, ವನ್ಯಜೀವಿ ಜಾಗೃತಿ ನಿಸರ್ಗ ಸಂಸ್ಥೆ ಖಾಸಗಿ ವ್ಯಕ್ತಿ ಕಟ್ಟಡ ನಿರ್ಮಿಸುತ್ತಿರುವ ಜಾಗ ಉದ್ಯಾನವನಕ್ಕೆ ಮೀಸಲಿಟ್ಟಿರುವ ಜಾಗವೇ ಎಂಬುವುದನ್ನು ಪರಿಶೀಲಿಸಲಾಗುವುದು. ಇಂಜಿನಿಯರ್‌ಗೆ ಸ್ಥಳಕ್ಕೆ ಭೇಟಿ ನೀಡಿ ವರದಿ ನೀಡಲು ಸೂಚಿಸಲಾಗಿದೆ. ಅವರಿಂದ ಮಾಹಿತಿ ಪಡೆದ ನಂತರ ಕ್ರಮಕೈಗೊಳ್ಳಲಾಗುವುದು. ರೇಣುಕಾ, ಆಯುಕ್ತೆ, ತುಮಕೂರು ಮಹಾನಗರ ಪಾಲಿಕೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net