

ಚಿತ್ರದುರ್ಗ: ಬಹುಜನರ ಅಭಿಪ್ರಾಯದಂತೆ ಹೋರಾಟಗಾರರಾದ ಜಯಣ್ಣ-ಒಡೆಯರ್ ಹೆಸರನ್ನೊಳಗೊಂಡ ಪ್ರಶಸ್ತಿಯನ್ನು ಸಾಧಕರೊಬ್ಬರಿಗೆ ನೀಡಲು ತೀರ್ಮಾನಿಸಲಾಗಿದೆ ಎಂದು ಭಾರತೀಯ ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಡಾ.ಬೀರಾವರ ಪ್ರಕಾಶ್ ತಿಳಿಸಿದ್ದಾರೆ.
ನಿಸ್ವಾರ್ಥ ಹೋರಾಟದ ಮೂಲಕ ಜನರ ಪ್ರೀತಿ ಗಳಿಸಿ, ಚಳವಳಿಯಲ್ಲಿ ಆಪ್ತಮಿತ್ರರೆಂದೇ ಗುರುತಿಸಿಕೊಂಡಿದ್ದ ದಸಂಸ ರಾಜ್ಯ ನಾಯಕ ಎಂ.ಜಯಣ್ಣ, ಅಹಿಂದ ಹೋರಾಟಗಾರ ಮುರುಘರಾಜೇಂದ್ರ ಒಡೆಯರ್ ಇಬ್ಬರ ಹೆಸರಿನ ರಾಜ್ಯಮಟ್ಟದ ಪ್ರಶಸ್ತಿ ಇದಾಗಿದ್ದು, ಮೇ ತಿಂಗಳಲ್ಲಿ ಪ್ರದಾನ ಮಾಡಲಾಗುವುದು ಎಂದು ಸೋಮವಾರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನೀರಾವರಿ ಸೇರಿ ಅನೇಕ ಹೋರಾಟಗಳಲ್ಲಿ ಪಾಲ್ಗೊಂಡ ಇಬ್ಬರು ಗೆಳೆಯರ ಚಳವಳಿಯ ಹಾದಿ ಅವಿಸ್ಮರಣೀಯ. ಹೀಗಾಗಿ ಸಾರ್ವಜನಿಕರು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ರಾಜ್ಯದಲ್ಲಿ ನಿಸ್ವಾರ್ಥ ಹೋರಾಟ ನಡೆಸಿದ ಗಣ್ಯರ ಹೆಸರನ್ನು ಪ್ರಶಸ್ತಿಗೆ ಆಯ್ಕೆ ಮಾಡಲು ಮೊ. 7026892777 ಶಿಫಾರಸು ಮಾಡಬಹುದಾಗಿದೆ.
ಜಾತ್ಯತೀತ ನೆಲೆಗಟ್ಟಿನಲ್ಲಿ ಬದುಕು ರೂಪಿಸಿಕೊಂಡಿರಬೇಕು. ಸರ್ವ ಜಾತಿ-ಧರ್ಮದ ಪರ ಚಿಂತನೆ ಹೊಂದಿರಬೇಕು. ಕನಿಷ್ಠ 60 ವರ್ಷ ಮೇಲ್ಪಟ್ಟಿರಬೇಕು. ಓದು-ಬರಹ, ಹೋರಾಟದ ಮೂಲಕ ಸಮಾಜಕ್ಕೆ ಕೊಡುಗೆ ನೀಡಿರಬೇಕು. ಅಂತಹವರನ್ನು ಸಾರ್ವಜನಿಕರು ಪ್ರಶಸ್ತಿಗೆ ಶಿಫಾರಸು ಮಾಡಿ ಎಂದು ಪ್ರಕಾಶ್ ಕೋರಿದ್ದಾರೆ.