ಜಯಂತಿಗಳಿಗೆ ಸಕಲ ಸಿದ್ಧತೆ ಕೈಗೊಳ್ಳಿ

Published on

ಬಳ್ಳಾರಿ : ಜಿಲ್ಲಾಡಳಿತದಿಂದ ವಿವಿಧ ಮಹನೀಯರ ಜಯಂತಿ ಆಚರಿಸಲು ಸಕಲ ಸಿದ್ಧತೆ ಕೈಗೊಳ್ಳಿ ಎಂದು ಎಡಿಸಿ ಮೊಹಮ್ಮದ್ ಝುಬೇರ್ ಹೇಳಿದರು.
ನಗರದ ನೂತನ ಜಿಲ್ಲಾಡಳಿತ ಭವನ ಸಭಾಂಗಣದಲ್ಲಿ ವಿವಿಧ ಮಹನೀಯರ ಜಯಂತಿ ಆಚರಣೆ ಕುರಿತು ಶುಕ್ರವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆ.19 ನುಲಿಯ ಚಂದಯ್ಯ, ಆ.20 ಬ್ರಹ್ಮಶ್ರೀ ನಾರಾಯಣಗುರು ಮತ್ತು ಆ.26 ಶ್ರೀಕೃಷ್ಣ ಜಯಂತಿಯ ಕಾರ್ಯಕ್ರಮಗಳನ್ನು ಅರ್ಥಪೂರ್ಣವಾಗಿ, ಅಚ್ಚುಕಟ್ಟಾಗಿ ಆಯೋಜಿಸಲಾಗುವುದು. ಎಲ್ಲ ಸಮುದಾಯದವರು, ಸಂಘ ಸಂಸ್ಥೆಗಳ ಮುಖಂಡರು, ಸಾರ್ವಜನಿಕರು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು. ಆ.19 ರಂದು ನುಲಿಯ ಚಂದಯ್ಯ ಜಯಂತಿಯ ಅಂಗವಾಗಿ ಮೆರವಣಿಗೆ ನೆರವೇರಲಿದ್ದು, ಮೆರವಣಿಗೆಯು ಬೆಂಕಿಮಾರೆಮ್ಮ ದೇವಸ್ಥಾನದಿಂದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದ ವೇದಿಕೆ ಕಾರ್ಯಕ್ರಮದವರೆಗೂ ನಡೆಯಲಿದೆ. ಆ.20 ರಂದು ಬ್ರಹ್ಮಶ್ರೀನಾರಾಯಣಗುರು ಜಯಂತಿ ಪ್ರಯುಕ್ತ ಮೆರವಣಿಗೆಯು ನಗರದ ಈಡಿಗ ವಸತಿ ನಿಲಯ ಮುಂಭಾಗದಿಂದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದ ವೇದಿಕೆ ಕಾರ್ಯಕ್ರಮದವರೆಗೂ ನಡೆಯಲಿದೆ. ಮೆರವಣಿಗೆಯಲ್ಲಿ ವಿವಿಧ ಸಾಂಸ್ಕೃತಿಕ ಕಲಾ ತಂಡಗಳು ಪ್ರದರ್ಶನ ನೀಡಲಾಗುವುದು ಎಂದರು.
ಆ.26 ರಂದು ಶ್ರೀಕೃಷ್ಣ ಜಯಂತಿಯು ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ನಡೆಯುವುದು. ಕಾರ್ಯಕ್ರಮದಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಸ್ವಚ್ಛತೆ ಕೈಗೊಳ್ಳಬೇಕು ಎಂದು ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು. ಗೀನಗಾಯನ, ಭಕ್ತಿಗೀತೆ ಕಾರ್ಯಕ್ರಮ ನಡೆಯಲಿದೆ. ಮಹನೀಯರ ಕುರಿತು ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ವಿಶೇಷ ಉಪನ್ಯಾಸ ಏರ್ಪಡಿಸಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net