

ಬಂಗಾರಪೇಟೆ: ಜಮ್ಮು-ಕಾಶ್ಮೀರದ ರಜೋರಿಯಲ್ಲಿ ಹುತಾತ್ಮನಾದ ಕಣಿಂಬೆಲೆ ಗ್ರಾಮದ ಯೋಧ ಕೆ.ಎನ್.ಪ್ರಶಾಂತ್ ಅಂತ್ಯಕ್ರಿಯೆ ಶನಿವಾರ ಸ್ವಗ್ರಾಮದ ಜಮೀನಿನಲ್ಲಿ ಸಂಜೆ ನೆರವೇರಿತು.
ಮದ್ರಾಸ್ ಎಂಆರ್‌ಸಿ 17ನೇ ಬೆಟಾಲಿನ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದ ಪ್ರಶಾಂತ್ ಮೃತದೇಹವನ್ನು ಸೇನೆಯ ವಿಧಿ-ವಿಧಾನಗಳು ಪೂರ್ಣಗೊಂಡ ಬಳಿಕ ಶನಿವಾರ ಮುಂಜಾನೆ ಬಂಗಾರಪೇಟೆಗೆ ತರಲಾಗಿತ್ತು.
ಪಟ್ಟಣದ ಜೂನಿಯರ್ ಕಾಲೇಜು ಮೈದಾನದಲ್ಲಿ ಬೆಳಗ್ಗೆ 6 ಗಂಟೆಯಿಂದಲೇ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಸಾವಿರಾರು ನಾಗರಿಕರು, ವಿದ್ಯಾರ್ಥಿಗಳು, ಜನಪ್ರತಿನಿಧಿಗಳು, ಜಿಲ್ಲಾಧಿಕಾರಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಉಪವಿಭಾಗಾಧಿಕಾರಿ, ತಹಸೀಲ್ದಾರ್ ಅಂತಿಮ ನಮನ ಸಲ್ಲಿಸಿದರು.
ಬೆಳಗ್ಗೆ 10 ಗಂಟೆಗೆ ಜೂನಿಯರ್ ಕಾಲೇಜು ಮೈದಾನದಿಂದ ಬಸ್ ನಿಲ್ದಾಣ, ಬಜಾರ್ ರಸ್ತೆ, ಕುವೆಂಪು ವೃತ್ತ, ನಂದಿ ಮೆಡಿಕಲ್ಸ್ ವೃತ್ತ, ಸಂತೇಗೇಟ್ ಸೇರಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು. ದಾರಿಯುದ್ದಕ್ಕೂ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಯೋಧನಿಗೆ ಪುಷ್ಪ ನಮನ ಸಲ್ಲಿಸಿದರು.
ವೀರಮರಣ ಹೊಂದಿದ ಪ್ರಶಾಂತ್ ಕುಟುಂಬದವರಿಗೆ ಸರ್ಕಾರದಿಂದ 4 ಎಕರೆ ಸರ್ಕಾರಿ ಜಾಗ ಮಂಜೂರು ಮಾಡಲು ತಹಸೀಲ್ದಾರ್, ಉಪವಿಭಾಗಾಧಿಕಾರಿ ಮತ್ತು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಂಸದ ಎಸ್.ಮುನಿಸ್ವಾಮಿ ತಿಳಿಸಿದರು.
ಶಾಸಕ ಎಸ್.ಎನ್.ನಾರಾಯಣಸ್ವಾಮಿ ಮಾತನಾಡಿ, ಯುವಕರಾಗಿರುವ ಪ್ರಶಾಂತ್ ಇನ್ನೂ 20 ವರ್ಷ ಸೇವೆ ಸಲ್ಲಿಸುವುದು ಅಗತ್ಯವಿತ್ತು. ಆದರೆ, ಅಕಾಲಿಕ ಮರಣದಿಂದ ಮನೆಯ ಮಗನನ್ನು ನಾವೆಲ್ಲರೂ ಕಳೆದುಕೊಂಡಿದ್ದೇವೆ ಎಂದರು.
ಮೃತರ ಕುಟುಂಬಕ್ಕೆ ಸಂಸದ ಎಸ್.ಮುನಿಸ್ವಾಮಿ ವೈಯಕ್ತಿಕ 2 ಲಕ್ಷ ರೂ., ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಚಂದ್ರಾರೆಡ್ಡಿ 50 ಸಾವಿರ, ಐನೋರ ಹೊಸಹಳ್ಳಿ ಗ್ರಾಪಂನಿಂದ 25 ಸಾವಿರ ರೂ. ನೀಡುವುದಾಗಿ ಘೋಷಿಸಿದರು. ಇದಲ್ಲದೆ ಯೋಧನ ಕುಟುಂಬದವರಿಗೆ 4 ಎಕರೆ ಜಾಗ ಹಾಗೂ ಕುಟುಂಬದಲ್ಲಿ ಒಬ್ಬರಿಗೆ ಸರ್ಕಾರಿ ನೌಕರಿ ನೀಡುವುದಾಗಿ ಭರವಸೆ ನೀಡಿದರು.
ಜಿಪಂ ಅಧ್ಯಕ್ಷ ಸಿ.ಎಸ್.ವೆಂಕಟೇಶ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಚಂದ್ರಾರೆಡ್ಡಿ, ಮಾಜಿ ಶಾಸಕರಾದ ಎಂ.ನಾರಾಯಣಸ್ವಾಮಿ, ಬಿ.ಪಿ.ವೆಂಕಟಮುನಿಯಪ್ಪ, ಪ್ರಭಾರಿ ಜಿಲ್ಲಾಧಿಕಾರಿ ಹಾಗೂ ಸಿಇಒ ಎಚ್.ವಿ.ದರ್ಶನ್, ಉಪವಿಭಾಗಾಧಿಕಾರಿ ವಿ.ಸೋಮಶೇಖರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಮದ್ ಸುಜೀತಾ, ತಹಸೀಲ್ದಾರ್ ಬಿ.ಕೆ.ಚಂದ್ರಮೌಳೇಶ್ವರ, ಇಒ ಎನ್.ವೆಂಕಟೇಶಪ್ಪ ಇತರರು ಇದ್ದರು.