ಜಮೀನ್ದಾರಿ ಪದ್ಧತಿ ತರಲು ಬಿಜೆಪಿ ಹುನ್ನಾರ

21
Published on

ಮೈಸೂರು: ಎಪಿಎಂಸಿ ಕಾಯ್ದೆ, ಭೂಸುಧಾರಣಾ ಕಾಯ್ದೆ, ಗೋಹತ್ಯೆ ನಿಷೇಧ ಕಾಯ್ದೆಯ ತಿದ್ದುಪಡಿ ವಿರೋಧಿಸುವ ಮೂಲಕ ಬಿಜೆಪಿ ಮತ್ತೆ ಜಮೀನ್ದಾರಿ ಪದ್ಧತಿ ತರಲು ಹುನ್ನಾರ ನಡೆಸಿದೆ ಎಂದು ಅಳಂದ ಶಾಸಕ ಬಿ.ಆರ್.ಪಾಟೀಲ್ ದೂರಿದರು.


ಹುತಾತ್ಮರಾದ ಎಂ.ರಾಮು ಚನ್ನಪಟ್ಟಣ ಮತ್ತು ಜಿ.ಟಿ.ರಾಮಸ್ವಾಮಿ ಅವರ ನೆನಪು ಮತ್ತು ಪಡಿತರ ವ್ಯವಸ್ಥೆಗೆ ರೈತರಿಂದಲೇ ಆಹಾರ ಉತ್ಪನ್ನಗಳನ್ನು ಕೊಳ್ಳುವ ಸಾಧ್ಯತೆ ಬಗ್ಗೆ ಕರ್ನಾಟಕ ರಾಜ್ಯ ರೈತ ಸಂಘ ಯುವ ಘಟಕದ ವತಿಯಿಂದ ನಗರದ ಹುಣಸೂರು ರಸ್ತೆಯಲ್ಲಿರುವ ಕೃಷಿ ಮಾರುಕಟ್ಟೆ ಅಧ್ಯಯನ ಸಂಸ್ಥೆ ಆವರಣದಲ್ಲಿ ಆಯೋಜಿಸಿದ್ದ ವಿಚಾರ ಮಂಡನೆ, ಸಂವಾದದಲ್ಲಿ ಮಾತನಾಡಿದರು.
ಎಪಿಎಂಸಿ ಕಾಯ್ದೆಯನ್ನು ರದ್ದುಪಡಿಸಲು ಬಿಜೆಪಿ ಬಲವಾಗಿ ವಿರೋಧಿಸುತ್ತಿದೆ. ಈ ಪಕ್ಷದ ನಿಲುವಿಗೆ ಪೂರಕವಾಗಿ ಜೆಡಿಎಸ್ ಸಹ ವಿರೋಧಿಸಿದ್ದು, ಸದನದಿಂದ ಹೊರ ನಡೆದಿದೆ. ರೈತರ ಹಿತಾಸಕ್ತಿಗೆ ವಿರುದ್ಧವಾಗಿ ಉಭಯ ಪಕ್ಷಗಳು ವರ್ತಿಸಿವೆ ಎಂದು ಕಿಡಿಕಾರಿದರು.


ಎಪಿಎಂಸಿ ಕಾಯ್ದೆಗೆ ಹಿಂದಿನ ಬಿಜೆಪಿ ಸರ್ಕಾರ ತಿದ್ದುಪಡಿ ಮಾಡಿತ್ತು. ಇದು ಎಪಿಎಂಸಿ ವ್ಯವಸ್ಥೆಗೆ ಮತ್ತು ರೈತರಿಗೆ ಮಾರಕವಾಗಿದೆ. ದೆಹಲಿಯಲ್ಲಿ ನಡೆದ ಹೋರಾಟ ಫಲವಾಗಿ ಕೇಂದ್ರ ಸರ್ಕಾರ ಈ ಕಾಯ್ದೆ ತಿದ್ದುಪಡಿಯನ್ನು ವಾಪಸ್ ಪಡೆದಿದೆ. ಆದರೆ, ಹಿಂದಿನ ರಾಜ್ಯ ಸರ್ಕಾರ ಹಿಂದಕ್ಕೆ ಪಡೆದಿರಲಿಲ್ಲ. ಈ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ ಎಂದರು.

.ಭೂ ಸುಧಾರಣಾ ಕಾಯ್ದೆ ಕುರಿತು ಸದನದಲ್ಲಿ ಚರ್ಚೆ ಆಗಲಿಲ್ಲ. ನಂತರ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಮನವಿ ಮಾಡಿ ಚರ್ಚೆಗೆ ಅವಕಾಶ ಕಲ್ಪಿಸಲು ಕೋರಲಾಯಿತು. ಬಿಜೆಪಿಯವರು ಅದನ್ನು ವಿರೋಧಿಸಿದ್ದರು. ಬಿಜೆಪಿಯವರು ರೈತರು, ಕಾರ್ಮಿಕರ ಪರವಾಗಿಲ್ಲ. ಅವರು ಬಂಡವಾಳಗಾರರ ಪರವಾಗಿದ್ದಾರೆ ಎಂದು ಕಿಡಿಕಾರಿದರು.


ಕೃಷಿಯನ್ನು ನಂಬಿ ಜೀವನ ನಡೆಸುವುದು ಕಷ್ಟಕರವಾಗಿದ್ದು, ಆದ್ದರಿಂದ, ರೈತರಿಗೆ ಪಿಂಚಣಿ ನೀಡಬೇಕು ಎಂದು ಆಗ್ರಹಿಸಿದರು. ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಗೌರವಾಧ್ಯಕ್ಷ ಚಾಮರಸ ಪಾಟೀಲ್, ಯುವ ಘಟಕದ ಆದಿತ್ಯ ನಾರಾಯಣ್, ಮುಖಂಡರಾದ ಹೊಸೂರು ಕುಮಾರ್, ಹೊಸಕೋಟೆ ಬಸವರಾಜ್, ಪ್ರಸನ್ನ ಎನ್.ಗೌಡ ಸೇರಿದಂತೆ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net