ಜಮೀನು ವಿಷಯವಾಗಿ ಹಲ್ಲೆ: ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ

ಜಮೀನು ವಿಷಯವಾಗಿ ಹಲ್ಲೆ: ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ
Published on

ಹಾಸನ : ಜಮೀನು ಉಳುಮೆ ವಿಚಾರಕ್ಕೆ ಜಮೀನಿನ ಮಾಲೀಕ ಎಂ.ಬಿ. ಕುಮಾರಸ್ವಾಮಿ ಅವರ ಕುಟುಂಬದವರ ಮೇಲೆ ಪಕ್ಕದ ಜಮೀನಿನ ಮಾಲೀಕ ಸ್ವಾಮಿ ಎಂಬುವವರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಹೊಳೆನರಸೀಪುರ ತಾಲೂಕು ಮಲುಗನಹಳ್ಳಿ ಗ್ರಾಮದ ನಿವಾಸಿ ಹೇಮಂತ್ ಅವರು ಗ್ರಾಮಸ್ಥರೊಂದಿಗೆ ಸೋಮವಾರ ಎಸ್ಪಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಹೇಮಂತ್, ಮಲುಗನಹಳ್ಳಿ ಗ್ರಾಮದ ಸ.ನಂ.7ರಲ್ಲಿ 59 ಗುಂಟೆ ಜಮೀನು ಕುಮಾರಸ್ವಾಮಿ ಅವರ ತಾತ ದ್ಯಾವಶೆಟ್ಟಿ ಅವರಿಗೆ 1958ರಲ್ಲಿ ದರಖಾಸ್ತಾಗಿ ಮಂಜೂರಾಗಿದೆ. ಇದನ್ನು ತಮ್ಮ ನಾಲ್ಕು ಜನ ಮಕ್ಕಳಿಗೆ ಖಾತೆ ಮಾಡಿಕೊಟ್ಟಿದ್ದಾರೆ. ಜಮೀನಿನಲ್ಲಿ ಉಳುಮೆ ಮಾಡುವ ಸಂದರ್ಭದಲ್ಲಿ ಪಕ್ಕದ ಜಮೀನಿನ ಮಾಲೀಕ ಸ್ವಾಮಿ ಮತ್ತು ಜಯಮ್ಮ ಎಂಬುವವರು ನಮಗೆ ಸೇರಬೇಕಾದ ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದೀರಾ ಎಂದು ಹೆದರಿಸಿ ಉಳುಮೆ ಮಾಡಲು ತೊಂದರೆ ಕೊಡುತ್ತಿದ್ದರು. ಈ ವಿಚಾರವಾಗಿ ಹಲವು ಬಾರಿ ಗಲಾಟೆಯಾಗಿದ್ದು, ಹಳ್ಳಿಮೈಸೂರು ಸಬ್ ಇನ್ಸ್‌ಪೆಕ್ಟರ್ ಸಮ್ಮುಖದಲ್ಲಿ ದಾಖಲೆ ಪ್ರಕಾರ ಅಳತೆ ಮಾಡಿಸಲಾಗಿತ್ತು. ಜೊತೆಗೆ ಕೋರ್ಟ್‌ನಲ್ಲೂ ನಮ್ಮ ಕುಟುಂಬದ ಪರವಾಗಿ ತೀರ್ಪು ಆಗಿದ್ದರೂ ಸಹ ಉಳುಮೆ ಮಾಡಲು ಬಿಡದೆ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಏ.9ರಂದು ಜಮೀನಿನಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಪಕ್ಕದ ಜಮೀನಿನ ಮಾಲೀಕ ಸ್ವಾಮಿ ಎಂಬುವವರು ಜಯಮ್ಮ, ಅಜಯ್, ಬೋಜಪ್ಪ, ಕುಮಾರ್ ಇತರ ಸಂಬಂಧಿಕರನ್ನು ಕರೆಸಿಕೊಂಡು ಕುಮಾರಸ್ವಾಮಿ ಮತ್ತು ಅವರ ಕುಟುಂಬದವರ ಮೇಲೆ ಏಕಾಏಕಿ ದಾಳಿ ಮಾಡಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಹೇಳಿದರು.

ಈ ಬಗ್ಗೆ ಹಳ್ಳಿ ಮೈಸೂರು ಪೊಲೀಸರಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಕುಟುಂಬದ ರಕ್ಷಣೆಗೆ ಒತ್ತಾಯಿಸಿ ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ನೀಡಿದರು.

ಪ್ರತಿಭಟನೆಯಲ್ಲಿ ಸಣ್ಣಸ್ವಾಮಿಶೆಟ್ಟಿ, ನಗರನಹಳ್ಳಿ ಗ್ರಾ.ಪಂ. ಮಾಜಿ ಸದಸ್ಯೆ ನಾಗರತ್ನಮ್ಮ, ಮಂಜು, ರಾಜೇಶ್, ಸೋಮಶೇಖರ್, ತಿಮ್ಮಪ್ಪಶೆಟ್ಟಿ, ಚಿಕ್ಕಣ್ಣಶೆಟ್ಟಿ, ಮಹಾಲಕ್ಷ್ಮೀ, ಪ್ರಭಾವತಿ, ಜಯಮ್ಮ, ಕುಸುಮಾ, ದೇವಿರಮ್ಮ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net