

ಚಿಕ್ಕಬಳ್ಳಾಪುರ : ಜಮೀನು ವಿವಾದದ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ತಾಲೂಕಿನ ಆವುಲನಾಗೇನಹಳ್ಳಿಯಲ್ಲಿ ಬೆಂಗಳೂರು ಉತ್ತರ ತಾಲೂಕಿನ ಬಂಡಿಕೋಡಿಗೇನಹಳ್ಳಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿಯನ್ನು ಸೋಮವಾರ ಸಂಜೆ ಕೊಚ್ಚಿ ಕೊಲೆ ಮಾಡಲಾಗಿದೆ.
ಕಾರ್ಯದರ್ಶಿ ಎ.ಸಿ.ರಾಮಾಂಜನೇಯ (52) ಮೃತ. ಪತ್ನಿ ಮಂಜುಳಾ (45) ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅರೂರಿನ ಚಿಕ್ಕಮಂಜುನಾಥ್, ದೊಡ್ಡ ಮಂಜುನಾಥ್, ಅರವಿಂದ ಮತ್ತಿತರರು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಐದಾರು ವರ್ಷಗಳ ಹಿಂದೆ ಆವುಲನಾಗೇನಹಳ್ಳಿಯಲ್ಲಿ ರಾಮಾಂಜನೇಯಗೆ ಸರ್ಕಾರಿ ಗೋಮಾಳ ಜಮೀನು ಸರ್ವೇ ನಂ 280ರಲ್ಲಿ 2.20 ಎಕರೆ ಮಂಜೂರಾಗಿತ್ತು. ಇದರ ಪಕ್ಕದಲ್ಲಿ ಸ್ಮಶಾನಕ್ಕೆ ಮೀಸಲಿಟ್ಟಿದ್ದ ಗೋಮಾಳದಲ್ಲಿನ 3 ಎಕರೆಯನ್ನು ಅರೂರು ಅರವಿಂದ ಎಂಬಾತ ಒತ್ತುವರಿ ಮಾಡಿಕೊಂಡು ಬೇಲಿ ಹಾಕಿದ್ದ. ಈ ಹಿನ್ನೆಲೆಯಲ್ಲಿ ರಾಮಾಂಜನೇಯ ಪೊಲೀಸರಿಗೆ ದೂರು ಸಲ್ಲಿಸಿ, ನ್ಯಾಯಾಲಯದ ಮೆಟ್ಟಿಲೇರಿದ್ದರು.
ಜಮೀನು ವಿವಾದದ ಹಿನ್ನೆಲೆಯಲ್ಲಿ ಒತ್ತುವರಿದಾರರು ಹಲವು ಬಾರಿ ಗಲಾಟೆ ಮಾಡಿದ್ದರು. ಸೋಮವಾರ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗಿ ಬಳಿಕ ಜಮೀನಿನಲ್ಲಿ ನಿಂತಿದ್ದ ರಾಮಾಂಜನೇಯ ಮತ್ತು ಮಂಜುಳಮ್ಮ ಮೇಲೆ ಅರೂರಿನ ಚಿಕ್ಕಮಂಜುನಾಥ್, ದೊಡ್ಡ ಮಂಜುನಾಥ್, ಅರವಿಂದ ಮತ್ತಿತರರು ಹಲ್ಲೆ ನಡೆಸಿದ್ದಾರೆ.
ಗಂಭೀರವಾಗಿ ಗಾಯಗೊಂಡ ರಾಮಾಂಜನೇಯ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.
ಸಚಿವ ಸುಧಾಕರ್ ಭೇಟಿ ; ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಗ್ರಾಪಂ ಕಾರ್ಯದರ್ಶಿಯ ಅಂತಿಮ ದರ್ಶನ ಪಡೆದರು. ಪ್ರಕರಣದ ಬಗ್ಗೆ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಲು ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ ಎಂದು ತಿಳಿಸಿದರು. ಇದೇ ವೇಳೆ ದಲಿತ ಸಂಘರ್ಷ ಸಮಿತಿ ಸಂಚಾಲಕ ಬಿ.ಎನ್.ಗಂಗಾಧರ್ ನೇತೃತ್ವದಲ್ಲಿ ದಲಿತ ಮುಖಂಡರು, ಮೃತ ಗ್ರಾಪಂ ಕಾರ್ಯದರ್ಶಿ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಲು ಸಚಿವರಿಗೆ ಮನವಿ ಸಲ್ಲಿಸಿದರು. ಮುಖಂಡರಾದ ಸು.ಧಾ.ವೆಂಕಟೇಶ್, ಲಾಯರ್ ಪ್ರಕಾಶ್ ಮತ್ತಿತರರು ಇದ್ದರು.