ಹುತ್ರಿದುರ್ಗ: ತಾಲೂಕಿನ ಹುತ್ರಿದುರ್ಗ ಹೋಬಳಿ ವ್ಯಾಪ್ತಿಯ ಸೋಮೆದೇವರ ಪಾಳ್ಯದಲ್ಲಿ ಭಾನುವಾರ ತೋಟದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ಅಟ್ಟಾಡಿಸಿ ಹಲ್ಲೆ ಮಾಡಿ ಕೈ ಕತ್ತರಿಸಲಾಗಿದೆ. ಸೋಮೆದೇವರ ಪಾಳ್ಯದ ಚಿಕ್ಕಲಿಂಗೇಗೌಡ ಗಾಯಾಳು. ಮಂಜುನಾಥ್ ಆರೋಪಿ. ಜಮೀನಿನಲ್ಲಿ ಚಿಕ್ಕಲಿಂಗೇಗೌಡ ಕೆಲಸ ಮಾಡುವ ವೇಳೆ ಮಚ್ಚು ಹಿಡಿದು ಬಂದ ದೊಡ್ಡಪ್ಪನ ಮಗ ಮಂಜುನಾಥ್ ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ ಮಾಡಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಚಿಕ್ಕಲಿಂಗೇಗೌಡನನ್ನು ಕುಟುಂಬಸ್ಥರು ಕುಣಿಗಲ್ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಳ್ಳೂರು ಕ್ರಾಸ್ನ ಬಿಜಿಎಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹಲ್ಲೆಗೆ ಜಮೀನು ವಿವಾದವೇ ಕಾರಣ ಎನ್ನಲಾಗಿದೆ. ಕುಣಿಗಲ್ ಪಟ್ಟಣ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.