ಜಮೀನು, ಗ್ರಾಮಗಳ ಸಂಪರ್ಕ ರಸ್ತೆ ಅಭಿವೃದ್ಧಿಗೆ ಒತ್ತು

21Rajesh5
Published on

ಚಾಮರಾಜನಗರ: ತಾಲೂಕಿನ ದೊಡ್ಡಕೆರೆ, ಚಿಕ್ಕಕೆರೆ ಅಚ್ಚುಕಟ್ಟು ವ್ಯಾಪ್ತಿಗೆ ಬರುವ ಜಮೀನು ಹಾಗೂ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಕಚ್ಚಾ ರಸ್ತೆಗಳನ್ನು ಅಭಿವೃದ್ಧಿಗೊಳಿಸಲು ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ ತಿಳಿಸಿದರು.

ತಾಲೂಕಿನ ರಾಮಸಮುದ್ರದಿಂದ ಬ್ಯಾಡಮೂಡ್ಲು, ಕರಿನಂಜನಪುರದಿಂದ ಕೋಡಿಮೋಳೆ ಬಸವನಪುರ ಗ್ರಾಮಗಳಿಗೆ ಸಂಪರ್ಕ ರಸ್ತೆ ಅಭಿವೃದ್ಧಿಗಾಗಿ ಕಾಡಾದಿಂದ ಬಿಡುಗೆಯಾಗಿರುವ 20 ಲಕ್ಷ ರೂ. ವೆಚ್ಚದಲ್ಲಿ ಕಚ್ಚಾ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಕಾವೇರಿ ಜಲಾನಯನ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಗೆ ಬರುವ ಈ ರಸ್ತೆಗಳು ಶಿಥಿಲಗೊಂಡಿದ್ದು, ಗಿಡಗಂಟಿ ಬೆಳೆದು ರೈತರು ಸಂಚರಿಸುವುದು ಕಷ್ಟವಾಗಿತ್ತು. ಹಳ್ಳ ಕೊಳ್ಳಗಳಿಂದ ಕೂಡಿದ್ದು, ಮಳೆ ಬಂದರೆ ತಮ್ಮ ಕೃಷಿ ಜಮೀನುಗಳಿಗೆ ಹೋಗಲು ಪ್ರಯಾಸ ಪಡುತ್ತಿದ್ದರು. ಇದನ್ನು ಮನಗಂಡು ಬ್ಯಾಡಮೂಡ್ಲುನಿಂದ ದೊಡ್ಡಕೆರೆಗೆ ಸಂಪರ್ಕ ಕಲ್ಪಿಸುವ 2.2 ಕಿ.ಮೀ. ರಸ್ತೆ ಹಾಗೂ ಬ್ಯಾಡಮೂಡ್ಲುನಿಂದ ಬಸವನಪುರಕ್ಕೆ ಸಂಪರ್ಕ ಕಲ್ಪಿಸುವ 500 ಮೀಟರ್ ರಸ್ತೆಯನ್ನು ಈ ಅನುದಾನದಲ್ಲಿ ಅಭಿವೃದ್ಧಿಪಡಿಸಲಿದ್ದಾರೆ ಎಂದರು.

ಮುಖಂಡರಾದ ಆರ್.ಪುಟ್ಟಮಲ್ಲಪ್ಪ, ಆರ್.ವಿ.ಮಹದೇವಸ್ವಾಮಿ, ನಗರಸಭಾ ಮಾಜಿ ಸದಸ್ಯ ಬಸವರಾಜು, ಶಿವಮೂರ್ತಿ, ಪ್ರಸನ್ನಕುಮಾರ್, ರಾಮಸಮುದ್ರ ಬಾಬು, ಅಕ್ಷಯ್, ಬಸನಪುರ ಮಹೇಶ್, ವೀರಭದ್ರಸ್ವಾಮಿ, ಬಿ.ಎಂ. ಮಹದೇವಸ್ವಾಮಿ, ಜಿ.ನಾಗರಾಜು, ಶಿವಶಂಕರ್, ಕರಿನಂಜನಪುರ ಮಹೇಶ್, ಗುರುಸ್ವಾಮಿ, ಕಾಡಾ ಎಇಇ ಗಣೇಶ್, ಎಇ ನಿವೇದಿತಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net