

ಧಾರವಾಡ: ರೈತನ ಜಮೀನಿನ ಶೆಡ್‌ನಲ್ಲಿ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿ ಎತ್ತು ಹಾಗೂ ದವಸ ಧಾನ್ಯ ಸುಟ್ಟ ಘಟನೆ ನಗರ ಹೊರವಲಯದಲ್ಲಿ ಶನಿವಾರ ಬೆಳಗ್ಗೆ ನಡೆದಿದೆ. ನಗರದ ಕಮಲಾಪುರದ ರೈತ ಬಸಪ್ಪ ಉಳವಪ್ಪ ಕಮತಿ ಎಂಬುವರ ಶೆಡ್‌ನಲ್ಲಿ ಅವಘಡ ಸಂಭವಿಸಿದೆ. ಜಮೀನಿನಲ್ಲಿನ ಶೆಡ್‌ನಲ್ಲಿ ಎತ್ತುಗಳನ್ನು ಕಟ್ಟುತ್ತಿದ್ದ ರೈತ, ಅಲ್ಲೇ ದವಸ ಧಾನ್ಯ ಸಂಗ್ರಹಿಸಿದ್ದರು. ಆಕಸ್ಮಿಕ ಬೆಂಕಿ ತಗುಲಿ ಎತ್ತು ಸಜೀವ ದಹನಗೊಂಡಿದ್ದು, ನೀರಾವರಿಗೆ ಬಳಸುತ್ತಿದ್ದ ಪೈಪ್, ಕೃಷಿ ಚಟುವಟಿಕೆಯ ಸಾಮಗ್ರಿಗಳು ಸುಟ್ಟಿವೆ. ದುರ್ಘಟನೆಯಲ್ಲಿ ಸುಮಾರು 8 ಲಕ್ಷ ರೂ. ಮೌಲ್ಯದ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.