

ಶೃಂಗೇರಿ: ಬಿಸಿಗಾಳಿ ಮತ್ತು ಹೆಚ್ಚುತ್ತಿರುವ ಉಷ್ಣದಿಂದ ತೋಟಗಾರಿಕೆ ಬೆಳೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿರುವ ಕುರಿತು ಎಚ್ಚರಿಕೆ ವಹಿಸಬೇಕು ಎಂದು ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಶ್ರೀಕೃಷ್ಣ ತಿಳಿಸಿದ್ದಾರೆ.
ಮಸಿಗೆ ಗ್ರಾಮದ ಕೃಷಿಕ ಹನುಗೋಡು ದಿವಾಕರ ಎಂಬುವವರ ಎರಡು ಎಕರೆ ತೋಟಕ್ಕೆ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಹೋಗಿದ್ದನ್ನು ಪರಿಶೀಲಿಸಿ ಮಾತನಾಡಿದರು.
ತೋಟಗಳಲ್ಲಿ ಒಣಗಿದ ಕಳೆಗಿಡಗಳನ್ನು ತೆಗೆಯುವುದು, ತೋಟದ ಸುತ್ತಲೂ ಮೂರು ಮೀಟರ್ ಅಂತರದಲ್ಲಿ ಕಳೆ ಗಿಡಗಳನ್ನು ತೆಗೆದು ಬೆಂಕಿ ಸುರಕ್ಷಿತ ವಲಯವನ್ನಾಗಿ ಮಾಡಬೇಕು. ತೋಟಗಾರಿಕಾ ಬೆಳೆಗಳಿಗೆ ಸರಿಯಾದ ಪ್ರಮಾಣದಲ್ಲಿ ನೀರುಣಿಸುವುದು, ಮಣ್ಣಿನಲ್ಲಿರುವ ತೇವಾಂಶ ಕಡಿಮೆಯಾಗದಂತೆ ನಿಗದಿತ ಪ್ರಮಾಣದಲ್ಲಿ ನಿರಂತರವಾಗಿ ನೀರನ್ನು ಒದಗಿಸಬೇಕು. ಅಡಕೆ, ಕಾಳುಮೆಣಸು ಇತರ ಬೆಳೆಗಳಿಗೆ ತುಂತುರು ನೀರಾವರಿಯಲ್ಲಿ ನೀರು ಒದಗಿಸಬೇಕು. ತೋಟಗಳಲ್ಲಿ ಐದರಿಂದ ಏಳು ಸೆಂ.ಮೀ ದಪ್ಪದ ತ್ಯಾಜ್ಯ ಒಣಗಿದ ಅಡಕೆ ಗರಿಗಳು ಇತರ ಸಾವಯವ ಪದಾರ್ಥಗಳ ಹೊದಿಕೆ ಮಾಡುವುದರಿಂದ ಮಣ್ಣಿನಲ್ಲಿ ತೇವಾಂಶ ಉಳಿಸಬಹುದು ಎಂದರು.
ಮಣ್ಣು ಪರೀಕ್ಷೆ ಮಾಡಿಸಿ ಗೊಬ್ಬರವನ್ನು ಕಾಲಕಾಲಕ್ಕೆ ನೀಡುವುದರ ಜತೆಗೆ ಜೀವಾಣು ಗೊಬ್ಬರಗಳಾದ ಎ.ಎಂ.ಸಿ, ಟ್ರೆಕೋಡರ್ಮಾ ಮತ್ತು ಸುಡಮಾನಸ್ ಗೊಬ್ಬರವನ್ನು ಅಡಕೆ, ಕಾಳುಮೆಣಸು, ಜಾಯಿಕಾಯಿ, ಲವಂಗ ಇತರ ಬೆಳೆಗಳಿಗೂ ನೀಡಬೇಕು. ತೋಟಗಾರಿಕಾ ಬೆಳೆಗಳಿಗೆ ಕಾಡುವ ರೋಗಗಳಿಗೆ ಶಿಫಾರಸು ಮಾಡಲಾದ ಗೊಬ್ಬರಗಳನ್ನು ಕಾಲಕಾಲಕ್ಕೆ ಹಾಕಬೇಕು ಎಂದು ತಿಳಿಸಿದರು.