ಜಮೀನಿನಲ್ಲಿ ಜೋಳದ ಫಸಲು ತೆರವುಗೊಳಿಸಿ ಅಂತ್ಯಕ್ರಿಯೆ

10 HANUR 2.
ಹನೂರು ತಾಲೂಕಿನ ವಿ.ಎಸ್.ದೊಡ್ಡಿ ಗ್ರಾಮದಲ್ಲಿ ಸೋಮವಾರ ಮೃತಪಟ್ಟ ವ್ಯಕ್ತಿಯ ಶವವನ್ನು ಖಾಸಗಿ ಜಮೀನಿನಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.
Published on

ಹನೂರು:

ತಾಲೂಕಿನ ಹುತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿ.ಎಸ್.ದೊಡ್ಡಿ ಗ್ರಾಮದಲ್ಲಿ ಸ್ಮಶಾನವಿಲ್ಲದೆ ಮೃತ ವ್ಯಕ್ತಿಯ ಅಂತ್ಯಕ್ರಿಯೆಯನ್ನು ಸೋಮವಾರ ಗ್ರಾಮಸ್ಥರು ಖಾಸಗಿ ಜಮೀನಿನಲ್ಲಿ ಜೋಳದ ಫಸಲು ತೆರವುಗೊಳಿಸಿ ನಡೆಸಿದರು.

ಗ್ರಾಮದ ರಾಚಶೆಟ್ಟಿ ಎಂಬವರು ಸೋಮವಾರ ಬೆಳಗ್ಗೆ ನಿಧನರಾದರು. ಆದರೆ ಶವಸಂಸ್ಕಾರ ಮಾಡಲು ಸ್ಮಶಾನ ಇರಲಿಲ್ಲ. ಇದರಿಂದ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ವಿಚಲಿತರಾದರು. ಬಳಿಕ ಗ್ರಾಮದ ಹರೀಶ್ ಎಂಬವರನ್ನು ಮನವೊಲಿಸಿದಾಗ ಅವರ ಜಮೀನಿನಲ್ಲಿ ಶವಸಂಸ್ಕಾರ ಮಾಡಲು ಅನುಮತಿ ಕೊಟ್ಟರು. ಬಳಿಕ ಜಮೀನಿನಲಿ ಬೆಳೆದಿದ್ದ ಜೋಳದ ಫಸಲನ್ನು ತೆರವುಗೊಳಿಸಿ ಶವ ಸಂಸ್ಕಾರ ನೆರವೇರಿಸಲಾಯಿತು.

ಗ್ರಾಮದಲ್ಲಿ ಸುಮಾರು 300ಕ್ಕೂ ಹೆಚ್ಚು ಕುಟುಂಬಗಳಿವೆ. ಆದರೆ ಸ್ಮಶಾನ ವ್ಯವಸ್ಥೆ ಇಲ್ಲ. ಈ ಹಿಂದೆ ಶವ ಸಂಸ್ಕಾರವನ್ನು ಗ್ರಾಮದ ಸಮೀಪದ ಅರಣ್ಯ ಪ್ರದೇಶದಲ್ಲಿ ನೆರವೇರಿಸಲಾಗುತ್ತಿತ್ತು. ಆದರೆ ಇತ್ತೀಚೆಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಅನುಮತಿ ನೀಡುತ್ತಿಲ್ಲ. ಇದರಿಂದ ತೊಂದರೆ ಎದುರಿಸುವಂತಾಗಿದೆ. ಗ್ರಾಮದ ಆಸುಪಾಸಿನಲ್ಲಿ ಸರ್ಕಾರಿ ಜಾಗವಿದ್ದು, ಸ್ಮಶಾನ ವ್ಯವಸ್ಥೆ ಒದಗಿಸಿಕೊಡುವಂತೆ ಜಿಲ್ಲಾಧಿಕಾರಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಲಾಗಿದೆ. ಈ ಬಗ್ಗೆ ಅಧಿಕಾರಿಗಳು ಸರ್ವೇ ಕಾರ್ಯ ನಡೆಸಿದ್ದಾರೆ. ಆದರೆ ಇದುವರೆಗೂ ಯಾವುದೇ ಕ್ರಮವಾಗಿಲ್ಲ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಶಾಸಕರು ಇನ್ನಾದರೂ ಇತ್ತ ಗಮನಹರಿಸಿ ಗ್ರಾಮಕ್ಕೆ ಸ್ಮಶಾನ ವ್ಯವಸ್ಥೆ ಕಲ್ಪಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net