

ಬೀರೂರು: ದೊಂಬಿದಾಸರಹಳ್ಳಿಯಿಂದ ಜಮೀನುಗಳಿಗೆ ತೆರಳುವ ರಸ್ತೆ ಬಂದ್ ಮಾಡಿದ್ದನ್ನು ಬುಧವಾರ ಬೀರೂರು ಕಂದಾಯ ನಿರೀಕ್ಷಕರು ಪೊಲೀಸರ ಸಹಕಾರ ಪಡೆದು ತೆರವುಗೊಳಿಸಿದರು.
ರಸ್ತೆಯನ್ನು ಒಬ್ಬರು ಮುಚ್ಚಿದ್ದರ ಬಗ್ಗೆ ವಿಜಯವಾಣಿ ಪತ್ರಿಕೆಯಲ್ಲಿ ‘ಜಮೀನುಗಳಿಗೆ ಹೋಗಲು ದಾರಿ ಬಿಡಿಸಿ’ ಎಂಬ ಶೀರ್ಷಿಕೆಯಡಿ ಬುಧವಾರ ಸುದ್ದಿ ಪ್ರಕಟವಾಗಿತ್ತು. ಈ ಹಿನ್ನೆಲೆಯಲ್ಲಿ ಕಂದಾಯ ನಿರೀಕ್ಷಕರು ಬುಧವಾರ ಜೆಸಿಬಿ ತರಿಸಿ ರಸ್ತೆಯಲ್ಲಿದ್ದ ಬಂಡೆಗಳನ್ನು ತೆರವುಗೊಳಿಸಿ ರೈತರ ಸುಗಮ ಸಂಚಾರಕ್ಕೆ ದಾರಿ ಮಾಡಿಕೊಟ್ಟರು.
ರೈತ ಕಾರ್ತಿಕ್ ಮಾತನಾಡಿ, ಹಲವಾರು ಬಾರಿ ಮನವಿ ನೀಡಿದರೂ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿರಲಿಲ್ಲ. ವಿಜಯವಾಣಿ ಪತ್ರಿಕೆಯಲ್ಲಿ ಸುದ್ದಿ ಪ್ರಕಟ ಮಾಡಿದ ಪರಿಣಾಮ ಕಂದಾಯ ಅಧಿಕಾರಿಗಳು ಜೆಸಿಬಿಯಿಂದ ಬಂಡೆಗಳನ್ನು ತೆರವು ಮಾಡಿ, ಕಾಲುವೆಯನ್ನು ಮುಚ್ಚಿ ಕೃಷಿಕರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಪತ್ರಿಕೆಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.