

ಶೃಂಗೇರಿ: ಯಾವುದೇ ಗಿಡಗಳ ಬೆಳವಣಿಗೆಗೆ ಸಮರ್ಪಕವಾಗಿ ಆಗಬೇಕಾದರೆ ನಾವು ನೀಡುವ ಗೊಬ್ಬರದ ಜತೆಗೆ ಮಣ್ಣು ಪರೀಕ್ಷೆ ಕೂಡಾ ಅಗತ್ಯವಾಗಿದೆ ಎಂದು ಸೆಹಗಲ್ ಸಂಸ್ಥೆಯ ಸುಮಂತ್ ತಿಳಿಸಿದರು.
ಮರ್ಕಲ್ ಗ್ರಾಪಂ ದೋಣೂರಿನಲ್ಲಿ ಶುಕ್ರವಾರ ಪುನಶ್ಚೇತನ ಕಾಫಿ, ಕೃಷಿ ಹಾಗೂ ರೈತ ಮಹಿಳೆಯರಿಗೆ ಮಣ್ಣು ಪರೀಕ್ಷೆಯಿಂದ ಆಗುವ ಉಪಯೋಗದ ಕುರಿತು ಮಾಹಿತಿ ನೀಡಿ ಮಾತನಾಡಿದರು.
ಬೆಳೆಗಳ ಉತ್ತಮ ಬೆಳವಣಿಗೆಗೆ ಪೋಷಕಾಂಶಯುಕ್ತ ಮಣ್ಣಿನ ಅವಶ್ಯಕತೆ ಅತಿ ಮುಖ್ಯ. ಪೋಷಕಾಂಶಗಳ ಮರು ಬಳಕೆ, ನೀರಿನ ಶುದ್ಧೀಕರಣ ಮತ್ತು ವಾತಾವರಣದೊಂದಿಗೆ ಅನಿಲಗಳ ವಿನಿಮಯ ಎಲ್ಲವೂ ಮಣ್ಣಿನಲ್ಲಿ ನಡೆಯುವ ಪ್ರಕ್ರಿಯೆಗಳು. ಸಸ್ಯಗಳು ಬೆಳೆಯಲು ಮೇಲಿನ ಮಣ್ಣು ತುಂಬ ಆರೋಗ್ಯಕರವಾಗಿರಬೇಕು. ಇದರಿಂದ ಉತ್ತಮ ಇಳುವರಿ ನಿರೀಕ್ಷಿಸಬಹುದು ಎಂದರು.
ಸಂಸ್ಥೆ ಪದಾಧಿಕಾರಿ ಜಯಣ್ಣ ಮಾತನಾಡಿ, ಸಣ್ಣಕಾಫಿ ಬೆಳೆಗಾರರು ಹೆಚ್ಚಾಗಿದ್ದು, ಬೆಳೆಗಾರರಿಗೆ ಕೃಷಿ ಮಾಹಿತಿ ನೀಡುವ ಉದ್ದೇಶದಿಂದ ಸಣ್ಣ ರೈತ ಗುಂಪು ರಚಿಸಿ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡಲಾಗುತ್ತದೆ. ಕಾಫಿ ಬೆಳೆಯ ಕಸಿ ಪದ್ಧತಿ, ರಸಗೊಬ್ಬರ ಪ್ರಮಾಣ ಮುಂತಾದ ಮಾಹಿತಿಯನ್ನು ಮುಂಬರುವ ದಿನಗಳಲ್ಲಿ ನೀಡಲಾಗುವುದು ಎಂದರು.
ರೈತ ಮಹಿಳೆಯರಾದ ಸಿ.ಆರ್.ಮಂಜುಳಾ, ಬಿ.ಎಂ.ಮಮತಾ, ಗೀತಾ, ಶಾಂತಾ, ಗಾಯತ್ರಿ, ಲಲಿತಾ, ಚಂದ್ರಾವತಿ ಇದ್ದರು.