

ಹಾಸನ: ಅರಸೀಕೆರೆ ತಾಲೂಕು ಗುಂಡುಕನಹಳ್ಳಿ ರೈತರೊಬ್ಬರು ತಮ್ಮ ಜಮೀನಿನ ಕೃಷಿ ಪಂಪ್ಸೆಟ್ಗೆ ಪಡೆದಿದ್ದ ವಿದ್ಯುತ್ ಸಂಪರ್ಕವನ್ನು
ವಿನಾಕಾರಣ ಕಟ್ ಮಾಡಲಾಗಿದ್ದು, ಸರಿ ಪಡಿಸಿ ಎಂದು ಕಳೆದ ಒಂದು ವರ್ಷದಿಂದ ಸಂಬಂಧಪಟ್ಟ ಎಲ್ಲರಿಗೂ ಮನವಿ ಮಾಡುತ್ತಿದ್ದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ನೊಂದ ರೈತ ಸುರೇಶ್ ಕಣ್ಣೀರಿಟ್ಟ ಪ್ರಸಂಗ ನಡೆಯಿತು.
ಕಳೆದ 1970 ರಿಂದಲೂ ನಾನು ನನ್ನ ನಾಲ್ಕು ಎಕರೆ ಜಮೀನಿಗೆ ಹಾಕಿಕೊಂಡಿರುವ ಕೃಷಿ ಪಂಪ್ಸೆಟ್ಗೆ ವಿದ್ಯುತ್ ಸಂಪರ್ಕ ಪಡೆದಿದ್ದೆ. ಆದರೆ ವರ್ಷದ ಹಿಂದೆ ನಮ್ಮ ಜಮೀನಿನ ಪಕ್ಕದ ನಂಜೇಶ್ ಮತ್ತು ಬಾಬು ಎಂಬುವರು ಸಂಪರ್ಕ ಕಡಿತ ಮಾಡಿದ್ದಾರೆ ಎಂದು ದೂರಿದರು. ಇದನ್ನು ಉದ್ದೇಶ ಪೂರ್ವಕವಾಗಿಯೇ ಮಾಡಲಾಗಿದೆ. ಇದು ಅಧಿಕಾರಿಗಳು ಹಾಗೂ ಪೊಲೀಸರಿಗೆ ಗೊತ್ತಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು. ಪದೇ ಪದೆ ಹೋಗಿ ಕೇಳಿದರೆ ಶಾಸಕರ ಬಳಿ ಹೋಗಿ ಎಂದು ಹೇಳುತ್ತಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಅಸಹಾಯಕತೆ ವ್ಯಕ್ತಪಡಿಸಿದರು.
ಈ ಸಂಬಂಧ ಸೆಸ್ಕಾಂ ಇಂಜಿನಿಯರ್ಗಳು ಹಾಗೂ ಗಂಡಸಿ ಪೊಲೀಸರಿಗೆ ದೂರು ನೀಡಿದ್ದರೂ, ಯಾವುದೇ ಪ್ರಯೋಜನ ಆಗಿಲ್ಲ ಎಂದು ಅಳಲು ತೋಡಿಕೊಂಡರು. ಕಳೆದ ಒಂದು ವರ್ಷದಿಂದ ವಿದ್ಯುತ್ ಸಂಪರ್ಕ ಇಲ್ಲದೆ ನನ್ನ ಜಮೀನಿಗೆ ನೀರು ಪೂರೈಕೆ ಮಾಡಲು ಆಗದೆ, ಎರಡು ಎಕರೆ ಜಮೀನಿನಲ್ಲಿ ಬೆಳೆದಿದ್ದ ಶುಂಠಿ ಮತ್ತು 1 ಎಕರೆ ವ್ಯಾಪ್ತಿಯಲ್ಲಿ ಬೆಳೆದಿದ್ದ ಬಾಳೆ ಹಾಳಾಗಿದೆ. ಗ್ರಾಮದ ಕೆರೆಯಲ್ಲೂ ನೀರಿಲ್ಲ, ಹೀಗಾದರೆ ನಮ್ಮ ಕುಟುಂಬ ಬದುಕುವುದಾದರೂ ಹೇಗೆ, ನಾನು ಮತ್ತು ನನ್ನ ಪತ್ನಿ ಎಲ್ಲಿಗೆ ಹೋಗಲಿ ಸಾಯಲಿ ಎಂದು ಎಂದು ಒಂದೇ ಸಮನೆ ಕಣ್ಣೀರಿಟ್ಟರು. ದಯವಿಟ್ಟು ಯಾರಾದರೂ ನನಗೆ ನ್ಯಾಯ ಕೊಡಿಸಿ ಎಂದು ಕಣ್ಣೀರ ಮನವಿ ಮಾಡಿದರು.
ಸಾಮಾಜಿಕ ಹೋರಾಟಗಾರ ಹಾಗೂ ರೈತ ಮುಖಂಡ ನಾಗೇಶ್ ಪಟೇಲ್ ಮಾತನಾಡಿ, ನಷ್ಟ ಅನುಭವಿಸಿರುವ ರೈತರಿಗೆ ಸೂಕ್ತ ಪರಿಹಾರ ನೀಡಬೇಕು.ಹಾಗೆಯೇ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಇಲ್ಲದಿದ್ದರೆ ಡಿಸಿ ಕಚೇರಿ, ಸೆಸ್ಕಾಂ ಇಲಾಖೆ ಎದುರು ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು.