

ಸವಣೂರ: ಹಲವು ದಿನಗಳಿಂದ ನಿರಂತರವಾಗಿ ಸುರಿದ ಮಳೆಗೆ ನದಿ ಹರಿವು ಹೆಚ್ಚಿದ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಹರಿದ ವರದಾ ನದಿ ನೀರು ತೊಂಡೂರ ಗ್ರಾಮದ ಹದ್ದಿನ ನೂರಾರು ಹೆಕ್ಟೇರ್ ಕೃಷಿ ಜಮೀನಿಗೆ ನುಗ್ಗಿ ಬೆಳೆ ಸಂಪೂರ್ಣ ಹಾನಿಯಾಗಿದೆ.
ಮೆಳ್ಳಾಗಟ್ಟಿ, ಕಳಸೂರ ಮೂಲಕ ಹಾಯ್ದುಹೋದ ವರದಾ ನದಿಯಲ್ಲಿ ನೀರು ಹೆಚ್ಚಳಗೊಂಡು ನದಿ ದಂಡೆಯ ಗ್ರಾಮಗಳಾದ ಕಳಸೂರ, ಮನ್ನಂಗಿ, ಮೆಳ್ಳಾಗಟ್ಟಿ, ಕುಣಿಮೆಳ್ಳಿಹಳ್ಳಿ, ಕಲಕೋಟಿ, ಹಿರೇಮೂಗದೂರ, ನದಿನೀರಲಗಿ, ಅರಳಿಹಳ್ಳಿ, ಹಿರೇಮರಳಿಹಳ್ಳಿ, ಚಿಕ್ಕಮರಳಿಹಳ್ಳಿ, ಹಲಸೂರ ಸೇರಿದಂತೆ ವಿವಿಧ ಗ್ರಾಮಗಳ ಹದ್ದಿನಲ್ಲಿರುವ ಕೃಷಿ ಜಮೀನುಗಳಿಗೆ ನದಿ ನೀರು ನುಗ್ಗಿದ್ದು, ತವರಮೆಳ್ಳಿಹಳ್ಳಿ, ತೊಂಡೂರ, ಹೊಸಳ್ಳಿ ಸೇರಿದಂತೆ ಹಲವಾರು ಗ್ರಾಮಗಳ ಜಮೀನುಗಳಿಗೆ ಹೆಚ್ಚು ನೀರು ನುಗ್ಗಿ ಸಂಪೂರ್ಣ ಬೆಳೆ ಹಾನಿಯಾಗಿದೆ.
ತೊಂಡೂರ ಗ್ರಾಮದ ನೂಲ್ವಿ ಕುಟುಂಬಸ್ಥರು 4 ಎಕರೆ ಜಮೀನಿನಲ್ಲಿ ಬೆಳೆದ ಹೆಸರು ಸಂಪೂರ್ಣ ನೀರಿನಲ್ಲಿ ಮುಳಗಿ ಕೊಳೆಯುವಿಕೆ ಆರಂಭವಾಗಿದೆ. ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿ ವೆಂಕಟೇಶ ಲಮಾಣಿ ಹಾಗೂ ಕಂದಾಯ ಇಲಾಖೆ ಸಿಬ್ಬಂದಿ ಭಾನುವಾರ ಭೇಟಿ ನೀಡಿ ಪರಿಶೀಲನೆ ಕೈಗೊಂಡರು.