ಜಮಖಂಡಿಯಲ್ಲಿ ೨೦೨೬ರ ದಸರಾ ಧರ್ಮ ಸಮ್ಮೇಳನ

Rambhapuri Shree
ಬಸವಕಲ್ಯಾಣದಲ್ಲಿ ಆಯೋಜಿಸಿದ್ದ ದಸರಾ ಧರ್ಮ ಸಮ್ಮೇಳನದಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳು ಜಮಖಂಡಿ ಶಾಸಕ ಜಗದೀಶ್ ಗುಡಗುಂಟಿ ಅವರನ್ನು ಸನ್ಮಾನಿಸಿ ಆಶೀರ್ವದಿಸಿದರು. ಸಚಿವ ರಹೀಮ್ ಖಾನ್, ಶಾಸಕ ಶರಣು ಸಲಗರ ಇತರರಿದ್ದರು.
Published on

ಬಸವಕಲ್ಯಾಣ: ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠದ ೨೦೨೬ರ ದಸರಾ ಧರ್ಮ ಸಮ್ಮೇಳನವನ್ನು ಬಾಗಲಕೋಟೆ ಜಿಲ್ಲೆ ಜಮಖಂಡಿಯಲ್ಲಿ ಆಯೋಜಿಸುವುದಾಗಿ ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಘೋಷಿಸಿದರು.

ನಗರದಲ್ಲಿ ಬುಧವಾರ ರಾತ್ರಿ ಆಯೋಜಿಸಿದ್ದ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನ ಸಮಾರೋಪದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಶಾಸಕ ಜಗದೀಶ್ ಗುಡಗುಂಟಿ ನೇತೃತ್ವದಲ್ಲಿ ಜಮಖಂಡಿಯಲ್ಲಿ ಮುಂದಿನ ಸಮ್ಮೇಳನ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಸಿದ್ಧರಬೆಟ್ಟ ಕ್ಷೇತ್ರದ ಶ್ರೀ ವೀರಭದ್ರ ಶಿವಾಚಾರ್ಯ, ಮಳಖೇಡದ ಹಜರತ್ ಸೈಯದ್ ಶಹಾ ಮುಸ್ತಾ ಖಾದ್ರಿ, ಪೌರಾಡಳಿತ ಮತ್ತು ಹಜ್ ಸಚಿವ ರಹೀಮ್ ಖಾನ್, ಜಮಖಂಡಿ ಶಾಸಕ ಜಗದೀಶ್ ಗುಡಗುಂಟಿ ಮಾತನಾಡಿದರು.

ಹಾರಕೂಡ ಶ್ರೀ ಡಾ.ಚನ್ನವೀರ ಶಿವಾಚಾರ್ಯ, ಶ್ರೀ ರಾಜೇಶ್ವರ ಶಿವಾಚಾರ್ಯ ತಡೋಳಾ, ಶ್ರೀ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯ, ರಾಜೇಶ್ವರದ ಶ್ರೀ ಘನಲಿಂಗ ರುದ್ರಮುನಿ ಶಿವಾಚಾರ್ಯ, ಶಾಸಕ ಶರಣು ಸಲಗರ, ಉಮರ್ಗಾ ಶಾಸಕ ಪ್ರವೀಣ ಸ್ವಾಮಿ, ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ, ಸೋಮನಾಥ ಪಟ್ನೆ, ಡಾ.ಸಂಗಮೇಶ ಸವದತ್ತಿಮಠ, ವೀರೇಶ ಕೂಗು ಇತರರಿದ್ದರು.

ಗೌರವ ಗುರುರಕ್ಷೆ: ಶ್ರೀ ಡಾ.ನಾಗಭೂಷಣ ಶಿವಾಚಾರ್ಯ ಮಳಲಿ, ಶ್ರೀ ಗುರುಶಾಂತೇಶ್ವರ ಶಿವಾಚಾರ್ಯ ನೆಗಳೂರು, ಶ್ರೀ ವಿಜಯಮಹಾಂತ ಶಿವಾಚಾರ್ಯ ಚಿಮ್ಮಾಇದಲಾಯಿ, ಶ್ರೀ ರೇವಣಸಿದ್ಧ ಶಿವಾಚಾರ್ಯ ರಟಕಲ್, ಶ್ರೀ ಚನ್ನರುದ್ರಮುನಿ ಶಿವಾಚಾರ್ಯ ಸೂಗುರು(ಕೆ) ಅವರಿಗೆ ಗೌರವ ಗುರುರಕ್ಷೆ ನೀಡಿ ಶ್ರೀ ರಂಭಾಪುರಿ ಜಗದ್ಗುರುಗಳು ಆಶೀರ್ವದಿಸಿದರು.

ನಜರ್ ಸಮರ್ಪಣೆ: ಸಮಾರಂಭದ ಕೊನೆಗೆ ನಾಡಿನ ಶಿವಾಚಾರ್ಯರು, ಶ್ರೀಪೀಠದ ಸಿಬ್ಬಂದಿ, ಧರ್ಮಾಭಿಮಾನಿಗಳು ಹಾಗೂ ಆನೆ ನಜರ್(ಗೌರವ) ಸಮರ್ಪಿಸಿದ ನಂತರ ಮೇಘರಾಜ ಚಕ್ರಸಾಲಿ ಸಲ್ಲಿಸಿದ ಹಗಲು ದೀವಟಿಗೆಯ ನಜರ್‌ನೊಂದಿಗೆ ಮುಕ್ತಾಯಗೊಂಡಿತು. ಮಳಲಿ ಶ್ರೀ ಡಾ.ನಾಗಭೂಷಣ ಶಿವಾಚಾರ್ಯ ನಿರೂಪಣೆ ಮಾಡಿದರು.

ಪ್ರಕೃತಿ ಮಾನವನನ್ನು ಸೃಷ್ಟಿಸಿದರೆ, ಸಂಸ್ಕಾರ ದೇವ ಮಾನವರನ್ನು ಸೃಷ್ಟಿಸುತ್ತದೆ. ಸಾಮಾಜಿಕ ಸಂಪ್ರದಾಯಗಳು ಬದಲಾಗಬಹುದು. ಆದರೆ ನೈತಿಕ ನಿಯಮಗಳು ಯಾವಾಗಲೂ ಶಾಶ್ವತ. ಸಂಪತ್ತು ಸಜ್ಜನರಿಗೆ ಬರುವುದು ಕೀರ್ತಿಗಾಗಿ, ದುರ್ಜನರಿಗೆ ವಿನಾಶಕ್ಕಾಗಿ ಎಂಬುದನ್ನು ಮರೆಯಲಾಗದು.

| ಶ್ರೀ ಡಾ.ವೀರಸೋಮೇಶ್ವರ ಜಗದ್ಗುರುಗಳು ರಂಭಾಪುರಿ

ಖಾದಿ, ಖಾಕಿ ಮತ್ತು ಕಾವಿ ನಿರ್ಮಲ ಮನಸ್ಸಿನಿಂದ ಕಾಯಕ ಮಾಡಿದರೆ ಜನಕಲ್ಯಾಣ ಜತೆಗೆ ಲೋಕ ಕಲ್ಯಾಣವಾಗಲಿದೆ. ಸೌಹಾರ್ದಯುತ ಸಹಬಾಳ್ವೆ ಜೀವನದ ತತ್ವವಾಗಬೇಕು. ಸಮಾಜದಲ್ಲಿರುವ ಎಲ್ಲರೂ ಸಹೋದರ ಭಾವದಿಂದ ಒಗ್ಗಟಾಗಿ ಬಾಳಬೇಕು. ಶ್ರೀ ರಂಭಾಪುರಿ ಜಗದ್ಗುರುಗಳ ದಸರಾ ಧರ್ಮ ಸಮ್ಮೇಳನ ಸರ್ವ ಜನಾಂಗದ ಶ್ರೇಯಸ್ಸು ಮತ್ತು ಸಾಮರಸ್ಯ ಬದುಕಿಗೆ ಸಾಕ್ಷಿಯಾಗಿದೆ.

| ರಹೀಮ್ ಖಾನ್ ಪೌರಾಡಳಿತ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net