ಜಪಾನ್​ನಲ್ಲಿ ತಡೆ ಹಿಡಿದಿದ್ದ ಡೈಮಂಡ್ ಪ್ರಿನ್ಸಸ್ ಹಡಗಿನಲ್ಲಿದ್ದ ಕಾರವಾರದ ಅಭಿಷೇಕ ಮಗರ್ ಮರಳಿ ದೇಶಕ್ಕೆ

27KWR-Abhishek
Published on

ಕಾರವಾರ: ಜಪಾನ್​ನಲ್ಲಿ ತಡೆ ಹಿಡಿಯಲಾಗಿದ್ದ ಡೈಮಂಡ್ ಪ್ರಿನ್ಸಸ್ ಹಡಗಿನಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಕಾರವಾರ ಮೂಲದ ಯುವಕ ಅಭಿಷೇಕ ಮಗರ್ ಬುಧವಾರ ಸ್ವದೇಶಕ್ಕೆ ಮರಳಿದ್ದಾರೆ. ಕರೊನಾ ಭೀತಿಯಿಂದ ಇವರು ಇದ್ದ ಹಡಗನ್ನು ತಡೆ ಹಿಡಿಯಲಾಗಿತ್ತು.

ಭಾರತ ಕಳಿಸಿದ್ದ ವಿಶೇಷ ವಿಮಾನದಲ್ಲಿ ಅವರು ಗುರುವಾರ ಬೆಳಗಿನ ಜಾವ 4 ಗಂಟೆಯ ಸುಮಾರಿಗೆ ನವದೆಹಲಿ ತಲುಪಿದ್ದಾರೆ. ನಂತರ ಅವರನ್ನು ಹರಿಯಾಣದ ಸೇನಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. 14 ದಿನ ವಿಶೇಷ ಆರೋಗ್ಯ ಪರೀಕ್ಷೆ, ನಿರೀಕ್ಷಣೆಯಲ್ಲಿಟ್ಟು ಬಳಿಕ ಮನೆಗೆ ಮರಳಲು ಅವಕಾಶ ನೀಡಲಾಗು ವುದು ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ ಎನ್ನಲಾಗಿದೆ.

ಪಾಲಕರು ನಿಟ್ಟುಸಿರು: ಅಭಿಷೇಕ ತಂದೆ ಬಾಲಕೃಷ್ಣ ಮಗರ್ ಕಾರವಾರ ಎನ್​ಡಬ್ಲ್ಯುಕೆಆರ್​ಟಿಸಿ ಘಟಕದಲ್ಲಿ ತಂತ್ರಜ್ಞರು.

ಉದ್ಯೋಗಕ್ಕೆಂದು ವಿದೇಶಕ್ಕೆ ತೆರಳಿದ್ದ ಮಗ ಹಡಗಿನಲ್ಲಿ ಸಿಕ್ಕಿ ಹಾಕಿಕೊಂಡಿದ್ದು, ಆತನನ್ನು ರಕ್ಷಣೆ ಮಾಡುವಂತೆ ಜಿಲ್ಲಾಧಿಕಾರಿ ಮೂಲಕ ವಿದೇಶಾಂಗ ಸಚಿವಾಲಯಕ್ಕೆ ಮನವಿ ಮಾಡಿಕೊಂಡಿದ್ದರು.

ಡೈಮಂಡ್ ಪ್ರಿನ್ಸಸ್ ಹಡಗಿನಲ್ಲಿ ಕರೊನಾ ಪೀಡಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸುದ್ದಿ ಮಾಧ್ಯಮಗಳಲ್ಲಿ ಬರುತ್ತಿತ್ತು. ಸಾವು ಕೂಡ ಸಂಭವಿಸಿತ್ತು. ಪ್ರತಿ ದಿನವೂ ನಮಗೆ ಆತಂಕ ಉಂಟಾಗುತ್ತಿತ್ತು. ಈಗ ಆತ ಸುರಕ್ಷಿತವಾಗಿ ಸ್ವದೇಶಕ್ಕೆ ತಲುಪಿದ್ದು ಕೇಳಿ ಸಂತಸವಾಗಿದೆ. ಆತನನ್ನು ನೋಡಲು ಅವಕಾಶ ನೀಡುತ್ತಾರೆ ಎಂದಾದಲ್ಲಿ ನಾನು ಭೇಟಿಯಾಗಲು ಉತ್ಸುಕನಾಗಿದ್ದೇನೆ. | ಬಾಲಕೃಷ್ಣ ಮಗರ್ ಅಭಿಷೇಕ ತಂದೆ

ಹಿನ್ನೆಲೆ: ಹೋಟೆಲ್ ಮ್ಯಾನೇಜ್​ವೆುಂಟ್ ಕೋರ್ಸ್ ಮಾಡಿಕೊಂಡಿದ್ದ ಕಾರವಾರ ಕೆನರಾ ಬ್ಯಾಂಕ್ ಕಾಲನಿಯ ಅಭಿಷೇಕ , ಬಮುಡಾ ಮೂಲದ ಪ್ರಿನ್ಸಸ್ ಕ್ರೂಸ್​ಲೈನ್ ಲಿಮಿಟೆಡ್​ನಲ್ಲಿ ಉದ್ಯೋಗಿಯಾಗಿ ಸೇರಿಕೊಂಡಿದ್ದರು. ಕಳೆದ ಮೂರು ತಿಂಗಳ ಹಿಂದಷ್ಟೇ ಕಾರವಾರದಿಂದ ತೆರಳಿದ್ದ ಅವರು, ಚೀನಾದ ಹಾಕಾಂಗ್​ನಿಂದ ಜಪಾನ್ ಟೋಕಿಯೊಗೆ ತೆರಳಲಿರುವ ಡೈಮಂಡ್ ಪ್ರಿನ್ಸಸ್ ಎಂಬ ಐಶಾರಾಮಿ ಹಡಗಿನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಕರೊನಾ ಭೀತಿಯ ಹಿನ್ನೆಲೆಯಲ್ಲಿ ಹಡಗನ್ನು ಟೋಕಿಯೊ ಬದಲು ಯೋಕೋಮಾ ಬಂದರಿನಲ್ಲೇ ಫೆ. 5 ರಂದು ಜಪಾನ್ ಸರ್ಕಾರ ತಡೆ ಹಿಡಿದಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net