ಜಪಾನ್ ಮೂಲದ ಸಂಸ್ಥೆಯೊಂದಿಗೆ ಒಡಂಬಡಿಕೆ

18
Published on

ಮೈಸೂರು; ನಗರದ ಜೆಎಸ್‌ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯವು ಜಪಾನ್ ಮೂಲದ ಯುಡಿ ಟ್ರಕ್ಸ್ ಪ್ರೈವೇಟ್ ಇಂಡಿಯಾ ಲಿಮಿಟೆಡ್‌ನೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ.

ಯುಡಿ ಟ್ರಕ್ಸ್ ಜಪಾನಿನ ವಾಣಿಜ್ಯ ವಾಹನ ಪೂರೈಕೆದಾರರಾಗಿದ್ದು, ವಿಶ್ವದ ಸುಮಾರು 60 ದೇಶಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. 1935ರಲ್ಲಿ ಸ್ಥಾಪಿಸಲ್ಪಟ್ಟ ಈ ಸಂಸ್ಥೆಯ ಪ್ರಧಾನ ಕಚೇರಿ ಜಪಾನ್‌ನಲ್ಲಿದೆ. ಯುಡಿ ಟ್ರಕ್ಸ್ ಪ್ರಸ್ತುತ ಜಗತ್ತಿಗೆ ಅಗತ್ಯವಿರುವ ಟ್ರಕ್ ಹಾಗೂ ಅದರ ಅಗತ್ಯ ಸೇವೆ ಪೂರೈಸುವ ಗುರಿ ಹೊಂದಿದೆ.

ವಿದ್ಯಾರ್ಥಿಗಳಿಗೆ, ಶಿಕ್ಷಣ ತಜ್ಞರಿಗೆ ತರಬೇತಿ, ಕೌಶಲಾಭಿವೃದ್ಧಿಗೆ ಸಹಕಾರಿಯಾಗಲು, ಸಂಬಂಧಿಸಿದ ಕ್ಷೇತ್ರದಲ್ಲಿ ಆಸಕ್ತಿ ಮಟ್ಟವನ್ನು ಹೆಚ್ಚಿಸಲು ಯುಡಿ ಟ್ರಕ್ಸ್ ಜೆಎಸ್‌ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿವಿಯಲ್ಲಿ ತಮ್ಮ ಉತ್ಪಾದನೆಯ ಒಂದು ಮಾದರಿ ಅಳವಡಿಸಿತ್ತು.

ಯುಡಿ ಟ್ರಕ್ಸ್‌ನ ವ್ಯವಸ್ಥಾಪಕ ನಿರ್ದೇಶಕ, ತಾಂತ್ರಿಕ ವಿಭಾಗದ ಮುಖ್ಯಸ್ಥ ಪಾಲ್‌ರಾಜ್ ಎಡ್ವಿನ್ ತಮ್ಮ ಸಂಸ್ಥೆಯ ಬಗ್ಗೆ, ನೂತನ ಉಪಕ್ರಮಗಳ ಬಳಕೆ ಬಗ್ಗೆ ವಿದ್ಯಾರ್ಥಿಗಳಿಗೆ ವಿವರಿಸಿದರು. ಆಟೋಮೊಬೈಲ್ ಉದ್ಯಮವನ್ನು ಎಲೆಕ್ಟ್ರಿಕಲ್ ಉದ್ಯಮವಾಗಿ ಪರಿವರ್ತಿಸಲು ಒತ್ತು ನೀಡಿರುವುದು, ಸರ್ಕಾರದ ಮಾನದಂಡಗಳಿಗೆ ಅನುಗುಣವಾಗಿ ತಮ್ಮ ಸಂಸ್ಥೆಯು ಅಭಿವೃದ್ಧಿಪಡಿಸುತ್ತಿರುವ ಅತ್ಯುತ್ತಮ ಇಂಜಿನ್‌ಗಳ ಬಗ್ಗೆ ಮಾಹಿತಿ ನೀಡಿದರು.

ವಿವಿ ಕುಲಪತಿ ಡಾ.ಎ.ಎನ್. ಸಂತೋಷ್‌ಕುಮಾರ್ ಮಾತನಾಡಿ, ಈ ಒಪ್ಪಂದವು ಶಿಕ್ಷಣ ಸಂಸ್ಥೆ ಮತ್ತು ಕೈಗಾರಿಕಾ ಕ್ಷೇತ್ರದ ನಡುವಿನ ಸಂಪರ್ಕ ವೃದ್ಧಿಸಿ ಅಭಿವೃದ್ಧಿಗೆ ನೆರವಾಗಲಿದೆ ಎಂದರು.

ಯುಡಿ ಟ್ರಕ್ಸ್‌ನ ಪಾಲ್‌ರಾಜ್ ಎಡ್ವಿನ್ ಮತ್ತು ಜೆಎಸ್‌ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿವಿ ಕುಲಸಚಿವ ಡಾ.ಎಸ್.ಎ. ಧನರಾಜ್ ಒಪ್ಪಂದಕ್ಕೆ ಸಹಿ ಹಾಕಿದರು.

ವಿವಿ ಅಧಿಕಾರಿಗಳಾದ ಡಾ.ಬಿ ಎಸ್.ಹರೀಶ್, ಡಾ.ಎಂ.ಪ್ರದೀಪ್, ಯುಡಿ ಟ್ರಕ್ಸ್‌ನ ಶುಭಾ ಕಡಿಯಾಳಿ, ಅತನು ಸೇನ್‌ಗುಪ್ತಾ, ಪೂರ್ಣಿಮಾ ಸ್ವಾಮಿನಾಥನ್, ಮುರಳಿ ಕೃಷ್ಣ, ವೇದಮೂರ್ತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net