ಜನ್ಮ ದಿನಾಚರಣೆಯಲ್ಲಿ ಹಾರಿತು ಗುಂಡು!

24 vikram 7
Published on

ಧಾರವಾಡ: ಕಾಂಗ್ರೆಸ್ ಮುಖಂಡನ ಜನ್ಮದಿನದ ಸಮಾರಂಭದಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿ ಶುಭ ಕೋರಿದ ಘಟನೆ ತಾಲೂಕಿನ ಶಿವಳ್ಳಿ ಗ್ರಾಮ ಬಳಿಯ ತೋಟದ ಮನೆಯಲ್ಲಿ ಮಂಗಳವಾರ ರಾತ್ರಿ ನಡೆದಿದೆ. ತಾಪಂ ಮಾಜಿ ಸದಸ್ಯ ಅಣ್ಣಪ್ಪಗೌಡ ಚಿನ್ನಗುಡಿ ಜನ್ಮದಿನ ಸಮಾರಂಭಕ್ಕೆ ಆಗಮಿಸಿದ್ದ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಆಯಟ್ಟಿ ಎಂಬುವವರು ರಿವಾಲ್ವರ್​ನಿಂದ ಗುಂಡು ಹಾರಿಸಿದ್ದಾರೆ. ಇದಾದ ಬಳಿಕ ರಿವಾಲ್ವರ್ ಪಾಯಿಂಟ್ ಇಟ್ಟು ಶುಭ ಹಾರೈಸಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ. ಘಟನೆ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಡಿಯೋ ಗಮನಿಸಿದ ಪೊಲೀಸರು, ಮಲ್ಲಿಕಾರ್ಜುನ ಆಯಟ್ಟಿ ಮತ್ತು ಅಣ್ಣಪ್ಪಗೌಡ ಅವರನ್ನು ಬುಧವಾರ ವಶಕ್ಕೆ ಪಡೆದಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಎಸ್ಪಿ ಪಿ. ಕೃಷ್ಣಕಾಂತ, ಶಸ್ತ್ರಾಸ್ತ್ರ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ. ಜನ್ಮದಿನ ಆಚರಿಸಿಕೊಂಡ ಹಾಗೂ ಗುಂಡು ಹಾರಿಸಿದವರನ್ನು ವಶಕ್ಕೆ ಪಡೆಯಲಾಗಿದೆ. ಓಪನ್ ಫೈರ್ ಮಾಡಿದ ಮಲ್ಲಿಕಾರ್ಜುನ ಆಯಟ್ಟಿ ಬಳಿ 2011ರಿಂದ ರಿವಾಲ್ವರ್ ಪರವಾನಗಿ ಇದೆ. ಈಗ ಆ ಪರವಾನಗಿ ರದ್ದು ಮಾಡಲಾಗಿದ್ದು, ತನಿಖೆ ನಡೆದಿದೆ ಎಂದು ಅವರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net