

ಮೂಡಿಗೆರೆ: ತಾಲೂಕಿನ ಜನ್ನಾಪುರದಲ್ಲಿ 18 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಇಂದಿರಾಗಾಂಧಿ ವಸತಿ ಶಾಲೆಯ ಕಟ್ಟಡವನ್ನು ಶಾಸಕಿ ನಯನಾ ಮೋಟಮ್ಮ ಪರಿಶೀಲಿಸಿದರು.
ಅಡುಗೆ ಕೋಣೆ, ಶೌಚಗೃಹ, ಊಟದ ಸಭಾಂಗಣ, ಶಾಲೆ ಆವರಣ ವೀಕ್ಷಿಸಿದರು. ನಂತರ ಮಾತನಾಡಿದ ಅವರು, ಬಾಳೂರಿನಲ್ಲಿದ್ದ ಇಂದಿರಾಗಾಂಧಿ ವಸತಿ ಶಾಲೆಯನ್ನು ಜನ್ನಾಪುರಕ್ಕೆ ಸ್ಥಳಾಂತರಿಗೊಳಿಸುವ ಸಲುವಾಗಿ 8 ಎಕರೆ ಪ್ರದೇಶದಲ್ಲಿ 18 ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಿಸಲಾಗಿದೆ. ಬಾಕ್ಸ್ ಚರಂಡಿ, ಆಟದ ಮೈದಾನ ಸೇರಿದಂತೆ ವಿದ್ಯಾರ್ಥಿಗಳ ಅವಶ್ಯಕತೆಗೆ ಬೇಕಾದ ಅಗತ್ಯ ಪರಿಕರಗಳಿಗೆ ಸರ್ಕಾರದಿಂದ ಅನುದಾನ ತಂದು ಶೀಘ್ರದಲ್ಲಿಯೇ ಉದ್ಘಾಟನೆ ನಡೆಸಲು ದಿನಾಂಕ ನಿಗದಿಪಡಿಸಲಾಗುವುದು. ಬಾಕಿ ಕಾಮಗಾರಿ ಶೀಘ್ರವಾಗಿ ಮುಗಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಹೇಳಿದರು.
ಗೋಣಿಬೀಡು ಹೋಬಳಿ ಕಾಂಗ್ರೆಸ್ ಅಧ್ಯಕ್ಷ ಎ.ಜೆ.ಸುಬ್ರಾಯಗೌಡ, ಪಿಡಬ್ಲುೃಡಿ ಸಹಾಯಕ ಕಾರ್ಯಪಾಲಕ ಅಭಿಯಂತರ ಚನ್ನಕೇಶವ, ಇಂಜಿನಿಯರ್ ಚನ್ನಯ್ಯ, ಶಾಲೆ ಪ್ರಾಂಶುಪಾಲ ಮಲ್ಲಿಕಾರ್ಜುನ ಹಾಗೂ ಸ್ಥಳೀಯ ಮುಖಂಡರು ಇದ್ದರು.