

ಚಾಮರಾಜನಗರ: ರಾಜ್ಯ ಸರ್ಕಾರ ಜನೌಷಧಿ ಕೇಂದ್ರಗಳನ್ನು ಮುಚ್ಚಲು ಹೊರಟಿರುವ ಕ್ರಮವನ್ನು ಖಂಡಿಸಿ ಕನ್ನಡಪರ ಸಂಘಟನೆಗಳ ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಬಿ.ರಾಚಯ್ಯ ಜೋಡಿರಸ್ತೆಯಲ್ಲಿರುವ ಜಿಲ್ಲಾಸ್ಪತ್ರೆ ಹಾಗೂ ಜನೌಷಧಿ ಕೇಂದ್ರದ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ಕೆಲಕಾಲ ಪ್ರತಿಭಟನೆ ನಡೆಸಿದರು. ರಾಜ್ಯ ಸರ್ಕಾರ, ಆರೋಗ್ಯ ಇಲಾಖೆ ಸಚಿವರ ವಿರುದ್ಧ ೋಷಣೆಯನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಸೇನಾಪಡೆ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಜನೌಷಧ ಕೇಂದ್ರಗಳು ಬಡ ರೋಗಿಗಳಿಗೆ ಕಡಿಮೆ ದರದಲ್ಲಿ ಔಷಧಿಗಳನ್ನು ನೀಡುತ್ತಿದೆ. ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಇದು ಹೆಚ್ಚು ಅನುಕೂಲವಾಗಿದೆ. ಇಂತಹ ಕೇಂದ್ರಗಳನ್ನು ತೆರವುಗೊಳಿಸಲು ರಾಜ್ಯ ಕಾಂಗ್ರೆಸ್ ಸರ್ಕಾರ ಮುಂದಾಗಿರುವುದು ಖಂಡನೀಯ ಎಂದರು.
ಕಾಂಗ್ರೆಸ್ ಸರ್ಕಾರ ಮೆಡಿಕಲ್ ಲಾಭಿಗೆ ಮಣಿದು ಹಾಗೂ ರಾಜಕಾರಣದ ಕಾರಣಕ್ಕೆ ಜನರಿಗೆ ಉಪಯೋಗವಾಗಿರುವ ಜನೌಷಧಿ ಕೇಂದ್ರಗಳನ್ನು ಮುಚ್ಚುವ ಹಂತಕ್ಕೆ ಬಂದಿದೆ. ಒಂದು ವೇಳೆ ಜನ ಉಪಯೋಗಿ ಜನೌಷಧಿ ಕೇಂದ್ರಗಳನ್ನು ಮುಚಿದರೇ ಮುಂದಿನ ದಿನಗಳಲ್ಲಿ ಎದುರಾಗುವ ಚುನಾವಣೆಗಳಲ್ಲಿ ಸರಿಯಾದ ಪಾಠ ಕಳಿಸುತ್ತೇವೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ನಿಜಧ್ವನಿಗೋವಿಂದರಾಜು, ಸಮಾಜ ಸೇವಕ ಡಾ.ಪರಮೇಶ್ವರಪ್ಪ, ಪಣ್ಯದಹುಂಡಿ ರಾಜು, ರಾಚಪ್ಪ, ಅರುಣ್ ಕುಮಾರ್ ಗೌಡ, ರೈತ ಮುಖಂಡ ಹಾಲಿನ ನಾಗರಾಜು, ಸುಬ್ಬಯ್ಯ, ತಾಂಡವಮೂರ್ತಿ, ವೀರಭದ್ರ, ಮುತ್ತಿಗೆ ಗೋವಿಂದರಾಜ, ಶಿವು, ದೊರೆ, ಸ್ವಾಮಿ, ಲಿಂಗರಾಜು, ಚೇತನ್ ಗೌಡ ಇತರರು ಭಾಗವಹಿಸಿದ್ದರು.