ಬಳ್ಳಾರಿ: ಕಳೆದ13 ವರ್ಷಗಳ ಬಳಿಕ ತವರು ಜಿಲ್ಲೆ ಬಳ್ಳಾರಿಗೆ ಆಗಮಿಸಿದ ಮಾಜಿ ಸಚಿವ, ಗಂಗಾವತಿ ಶಾಸಕ ಜಿ.ಜನಾರ್ಧನ ರೆಡ್ಡಿ ಅವರನ್ನು, ಬಾಣ, ಬಿರುಸು, ವಿವಿಧ ಸಾಂಸ್ಕೃತಿಕ ಕಲಾ ತಂಡಗಳ ಹೆಜ್ಜೆ ನಾದದೊಂದಿಗೆ ಅದ್ಧೂರಿಯಾಗಿ ಗುರುವಾರ ಸಂಜೆ ಸ್ವಾಗತಿಸಲಾಯಿತು.
ನೆರೆಯ ಗಂಗಾವತಿಯಿಂದ ತೆರಳಿದ ಶಾಸಕ ಜನಾರ್ಧನ ರೆಡ್ಡಿ, ಹೊಸಪೇಟೆ ರಸ್ತೆ ಮೂಲಕ ತವರು ಜಿಲ್ಲೆ ಬಳ್ಳಾರಿ ನಗರಕ್ಕೆ ಪ್ರವೇಶಿಸಿದರು. ಮಾರ್ಗಮಧ್ಯೆ ನಗರ ಹೊರವಲಯದ ಅಲ್ಲೀಪುರ ಬಳಿ ಜಮಾಯಿಸಿದ್ದ ನೂರಾರು ಸಂಖ್ಯೆಯ ಅಭಿಮಾನಿಗಳು ಜೆಸಿಬಿಯಿಂದ ಗಜಮಾಲೆ ಹಾಕಿ, ಸುಮಂಗಲೆಯರು ಕುಂಭ ಹೊತ್ತು ಜನಾರ್ಧನರೆಡ್ಡಿಯನ್ನು ಅದ್ಧೂರಿಯಾಗಿ ಬರಮಾಡಿಕೊಂಡರು.
ಬಳಿಕ ಮಹಾದೇವ ತಾತ ಮಠದಲ್ಲಿ ತಾತನ ಆಶೀರ್ವಾದ ಪಡೆದ ಜನಾರ್ಧನ ರೆಡ್ಡಿ, ಅಲ್ಲಿಂದಲೇ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ನಗರದೊಳಕ್ಕೆ ಪ್ರವೇಶ ಮಾಡಿದರು. ಈ ವೇಳೆ ಅಭಿಮಾನಿಗಳಿಂದ ಆಕಾಶದಲ್ಲಿ ಚಿತ್ತಾರ ಮೂಡಿಸುತ್ತಿದ್ದ ಬಾಣ ಬಿರುಸುಗಳ ಅಬ್ಬರ, ತಾಶಾರಾಂಡೋಲುಗಳ ಸದ್ದು, ಗೊರವಯ್ಯ ಕುಣಿತದೊಂದಿಗೆ ಮಡರವಣಿಗೆ ಮೂಲಕ ಜನಾರ್ಧನರೆಡ್ಡಿ ನಗರಕ್ಕೆ ಆಗಮಿಸಿದರು. ರೆಡ್ಡಿಯನ್ನು ನೋಡಲು ರಸ್ತೆಯ ಇಕ್ಕೆಲಗಳಲ್ಲಿ ಸ್ಥಳೀಯರು ಸಾಲಾಗಿ ನಿಂತಿದ್ದ ದೃಶ್ಯ ಕಂಡುಬಂತು.
ನಗರದ ಪ್ರಮುಖ ರಸ್ತೆಯಲ್ಲಿ ಜನಾರ್ಧನ ರೆಡ್ಡಿಯ ಮೆರವಣಿಗೆಯ ತೆರಳುವ ಹಿನ್ನೆಲೆಯಲ್ಲಿ ಸುಧಾವೃತ್ತ, ರೇಡಿಯೋ ಪಾರ್ಕ್ ಬಳಿ ಪಾಲಿಕೆ ಸದಸ್ಯ ಗೋವಿಂದರಾಜುಲು, ಮೋತಿ ವೃತ್ತದಲ್ಲಿ ರೆಡ್ಡಿ ಬೆಂಬಲಿಗ ಮುನ್ನಾಭಾಯಿ, ಗಡಗಿ ಚನ್ನಪ್ಪ ವೃತ್ತದಲ್ಲಿ ಹುಂಡೇಕರ್ ರಾಜೇಶ್ ಜೆಸಿಬಿ ಮೂಲಕ ಗಜಮಾಲೆ ಹಾಕಿ, ಹೂವಿನ ಮಳೆ ಸುರಿಸುವ ಮೂಲಕ ಸ್ವಾಗತಿಸಿದರು. ಬಳಿಕ ನಗರದ ಅಧಿದೇವತೆ ಕನಕ ದುರ್ಗಮ್ಮ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಅಲ್ಲಿಂದ ಎಸ್ ಪಿ ವೃತ್ತದ ಮೂಲಕ ಸಿರುಗುಪ್ಪ ರಸ್ತೆಯಲ್ಲಿನ ತಮ್ಮ ನಿವಾಸಕ್ಕೆ ತೆರಳಿದರು.