ಜನಾರ್ದನರೆಡ್ಡಿ ಬಳ್ಳಾರಿ ಪ್ರವೇಶಕ್ಕೆ ಅನುಮತಿ

Published on

ಬಳ್ಳಾರಿ : ಅಕ್ರಮ ಗಣಿಗಾರಿಕೆ ಆರೋಪದ ಹಿನ್ನೆಲೆ ಕಳೆದ ಒಂದೂವರೆ ದಶಕಗಳಿಂದ ಜಿಲ್ಲೆಗೆ ಪ್ರವೇಶವಿಲ್ಲದೆ ವನವಾಸ ಅನುಭವಿಸಿದ್ದ ಮಾಜಿ ಸಚಿವ ಗಂಗಾವತಿ ಹಾಲಿ ಶಾಸಕ ಗಾಲಿ ಜನಾರ್ದನರೆಡ್ಡಿ ಗಣಿನಾಡು ಬಳ್ಳಾರಿ ಪ್ರವೇಶಿಸಲು ಸುಪ್ರೀಂಕೋರ್ಟ ಸೋಮವಾರ ಅನುಮತಿ ನೀಡಿದೆ.
ರಾಜ್ಯದ ಗಡಿ ಒತ್ತುವರಿ, ಗಡಿ ಗುರುತು ಧ್ವಂಸ ಹಾಗೂ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಮುಖ್ಯ ಆರೋಪಿಯಾಗಿದ್ದ ಜನಾರ್ದನ ರೆಡ್ಡಿಯವರನ್ನು 2011ರ ಸೆ.5 ರಂದು ಸಿಬಿಐ ಅಧಿಕಾರಿಗಳು ಬಂಧಿಸಿ, ನೆರೆಯ ಆಂಧ್ರದ ಚರ್ಲಪಲ್ಲಿ ಜೈಲಿನಲ್ಲಿ ಇಡಲಾಗಿತ್ತು. ನಂತರ ನಡೆದ ವಿಚಾರಣೆಯಲ್ಲಿ ಜನಾರ್ದನ ರೆಡ್ಡಿ ಪ್ರಭಾವಿಯಾಗಿದ್ದು ಸಾಕ್ಷಿ ನಾಶ ಹಿನ್ನೆಲೆಯಲ್ಲಿ ಅಕ್ರಮ ಗಣಿಗಾರಿಕೆ ನಡೆಸಿದ ಪ್ರದೇಶಗಳಾದ ಬಳ್ಳಾರಿ, ಅನಂತಪುರ ಮತ್ತು ಕರ್ನೂಲು ಜಿಲ್ಲೆ ಪ್ರವೇಶ ನಿಷೇಧ ಹೇರಲಾಗಿತ್ತು. ಹೀಗಾಗಿ 13 ವರ್ಷಗಳಿಂದ ಜನಾರ್ದನ ರೆಡ್ಡಿ ಜಿಲ್ಲೆಯಿಂದ ದೂರವಿದ್ದರು. ಮಗಳ ಬ್ರಾಹ್ಮಿಣಿ ಮದುವೆ, ಮೊಮ್ಮೊಗಳ ನಾಮಕರಣ ಸೇರಿದಂತೆ ಇತರೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ನಾಲ್ಕೈದು ಬಾರಿ ಮಾತ್ರ ಆಗಮಿಸಿದ್ದರು. ಆದರೆ ಇದೀಗ ಶಾಶ್ವತವಾಗಿ ಬಳ್ಳಾರಿಯಲ್ಲಿ ಉಳಿದುಕೊಳ್ಳಲು ಸುಪ್ರೀಂ ಕೋರ್ಟ ಅಸ್ತು ನೀಡಿದೆ. ಜಿಲ್ಲೆಯಲ್ಲಿ ರೆಡ್ಡಿ ಅಭಿಮಾನಿ ಬಳಗ ಹಾಗೂ ಬಿಜೆಪಿ ಕಾರ್ಯಕತರು ಇಲ್ಲಿನ ರಾಯಲ್ ವೃತ್ತದಲ್ಲಿ ಕೇಕ್ ಕತ್ತರಿಸಿ ವೆಲ್ ಕಮ್ ಟು ಜಿಜೆಆರ್ ಬ್ಯಾನರ್ ಹಿಡಿದು ಕುಣಿದರು. ಬಳಿಕ ಕನಕ ದುರ್ಗಮ್ಮ ದೇವಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಎಸ್ಪಿ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂತಸ ವ್ಯಕ್ತಪಡಿಸಿದರು. ಗುರುವಾರ ನಗರಕ್ಕೆ ಗೋದುಳಿ ಲಗ್ನದಲ್ಲಿ ಭೇಟಿ ನೀಡಲಿದ್ದು, ಅದ್ದೂರಿ ಪ್ರವೇಶಕ್ಕೆ ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net