ಜನಾಕ್ರೋಶ ಯಾತ್ರೆ ಸಮಾರೋಪ ಹುಬ್ಬಳ್ಳಿಯಲ್ಲಿ

Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ಬೆಲೆ ಏರಿಕೆ ವಿರುದ್ಧ ಪಕ್ಷ ಸಂಘಟಿಸಿರುವ ಜನಾಕ್ರೋಶ ಯಾತ್ರೆಯ ಸಮಾರೋಪ ಸಮಾರಂಭ ಮೇ 11ರಂದು ಸಂಜೆ 4 ಗಂಟೆಗೆ ಹುಬ್ಬಳ್ಳಿ ಮೂರುಸಾವಿರ ಮಠದ ಶಾಲಾ ಮೈದಾನದಲ್ಲಿ ನಡೆಯಲಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ ತಿಳಿಸಿದರು.

ಹುಬ್ಬಳ್ಳಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ, ವಿಧಾನ ಪರಿಷತ್ ವಿಪಕ್ಷ ನಾಯಕ ಚಲವಾದಿ ನಾರಾಯಣಸ್ವಾಮಿ, ಕೇಂದ್ರ ಸಚಿವರು, ಪ್ರಮುಖರು ಪಾಲ್ಗೊಳ್ಳುವರು. ಅಂದು ಸಮಾರೋಪದ ಪೂರ್ವ ದುರ್ಗದಬೈಲ್​ನಿಂದ ಮೂರುಸಾವಿರ ಮಠದವರೆಗೆ ಪ್ರತಿಭಟನಾ ರ‍್ಯಾಲಿ ಆಯೋಜಿಸಲಾಗಿದೆ ಎಂದರು.

ಮೈಸೂರಿನಲ್ಲಿ ಚಾಲನೆ ಪಡೆದ ಜನಾಕ್ರೋಶ ಯಾತ್ರೆ ಬೆಂಗಳೂರು ಹೊರತುಪಡಿಸಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆದಿದೆ. ಮೇ 7ರಂದು ಕೋಲಾರ, 8 ತುಮಕೂರು ಮತ್ತು ಚಿತ್ರದುರ್ಗ, 9 ಬಳ್ಳಾರಿ ಮತ್ತು ವಿಜಯಪುರ, 10ರಂದು ಚಿಕ್ಕಬಳ್ಳಾಪುರದಲ್ಲಿ ಜನಾಕ್ರೋಶ ಯಾತ್ರೆ ಸಂಚರಿಸಲಿದೆ ಎಂದು ಹೇಳಿದರು.

ಹುಡುಕಿ ಹುಡುಕಿ ಬೆಲೆ ಏರಿಕೆ

ಮನೆಯ ಜಾಗದಲ್ಲಿ ನಿಲುಗಡೆ ಮಾಡುವ ಸ್ವಂತ ವಾಹನಗಳಿಗೆ ರ್ಪಾಂಗ್ ಶುಲ್ಕ ವಿಧಿಸಲಾಗಿದೆ. ಜನನ-ಮರಣ ಪ್ರಮಾಣಪತ್ರದ ಶುಲ್ಕದಲ್ಲೂ ಏರಿಕೆ ಮಾಡಿದೆ. ಹೀಗೆ ರಾಜ್ಯ ಸರ್ಕಾರ 50 ವಸ್ತುಗಳ ಬೆಲೆಯನ್ನು ಏರಿಸಿದೆ. ಹುಡುಕಿ ಹುಡುಕಿ ಬೆಲೆ ಏರಿಕೆ ಮಾಡುತ್ತಿದೆ. ಬಹುಶಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಲೆ ಏರಿಸಲು ಸಂಶೋಧನ ತಂಡವನ್ನು ರಚಿಸಿಕೊಂಡಿದ್ದಾರೆಂದು ಅನಿಸುತ್ತಿದೆ ಎಂದು ಟೀಕಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net