

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಖಂಡಿಸಿ ಬಿಜೆಪಿ ಆಯೋಜಿಸಿರುವ ಜನಾಕ್ರೋಶ ಯಾತ್ರೆ ಏ 16 ರಂದು ಹುಬ್ಬಳ್ಳಿಗೆ ಆಗಮಿಸಲಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ ತಿಳಿಸಿದರು.
ಹುಬ್ಬಳ್ಳಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಸಂಜೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಪಕ್ಷದ ರಾಷ್ಟ್ರೀಯ ಹಾಗೂ ರಾಜ್ಯ ಮುಖಂಡರು ಪಾಲ್ಗೊಳ್ಳುವರು. ಸುಮಾರು 25 ಸಾವಿರ ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ರಾಜ್ಯ ಸರ್ಕಾರ ಕಳೆದ 1 ವರ್ಷದಲ್ಲಿ 3ನೇ ಬಾರಿ ಹಾಲಿನ ದರ ಹೆಚ್ಚಿಸಿದೆ. ಚುನಾವಣಾ ಪ್ರಣಾಳಿಕೆಯಲ್ಲಿ ಹಾಲಿಗೆ ಪ್ರತಿ ಲೀಟರ್ಗೆ 7 ರೂ. ಪ್ರೋತ್ಸಾಹ ಧನ ನೀಡುವುದಾಗಿ ಭರವಸೆ ನೀಡಿತ್ತು. ಆದರೆ, ನೀಡಬೇಕಾದ ಪ್ರೋತ್ಸಾಹ ಧನದ ಮೊತ್ತ ಬಾಕಿ ಉಳಿಸಿಕೊಂಡಿದೆ. ಶಕ್ತಿ ಯೋಜನೆಯಡಿ ಸಾರಿಗೆ ನಿಗಮಗಳಿಗೆ ಪಾವತಿಸಬೇಕಾದ 7 ಸಾವಿರ ಕೋಟಿ ರೂ. ಬಾಕಿ ಉಳಿಸಿಕೊಂಡಿದೆ. ಆಸ್ತಿ ಅಮಾನ್ಯೀಕರಣಗೊಳಿಸಿ ಆರ್ಥಿಕ ಸಂಪನ್ಮೂಲ ಕ್ರೋಢಿಕರಿಸಿಕೊಳ್ಳಬೇಕು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಯವರು ನಿಗಮಗಳಿಗೆ ಸೂಚಿಸಿದ್ದಾರೆ ಎಂದು ಹೇಳಿದರು.
ರಾಜ್ಯ ಕಾಂಗ್ರೆಸ್ ಸರ್ಕಾರ, ರೈತರಿಗೆ ವಾರ್ಷಿಕ 4 ಸಾವಿರ ರೂ. ಪಾವತಿಸಲಾಗುತ್ತಿದ್ದ ಕೃಷಿ ಸಮ್ಮಾನ ಯೋಜನೆಯನ್ನು ನಿಲ್ಲಿಸಿದೆ. ಯಾವ ನೀರವಾರಿ ಯೋಜನೆಗೂ ಅನುದಾನ ನೀಡುತ್ತಿಲ್ಲ. ಹಣದುಬ್ಬರ ಪ್ರಮಾಣದಲ್ಲಿ ಕರ್ನಾಟಕ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ. ರಾಜ್ಯ ಸರ್ಕಾರದ ಅವೈಜ್ಞಾನಿಕ ನೀತಿಯಿಂದಾಗಿ ಹಣದುಬ್ಬರ ಹೆಚ್ಚಾಗಿದೆ. ಕೇಂದ್ರ ಸರ್ಕಾರ ಅಡುಗೆ ಅನಿಲ ದರ ಹೆಚ್ಚಿಸಿರುವುದು ಹೊರೆಯೆಂದು ಒಪ್ಪಿಕೊಳ್ಳುತ್ತೇವೆ. ಆದರೆ, ರಾಜ್ಯ ಸರ್ಕಾರ ಹಾಲು, ವಿದ್ಯುತ್, ಡೀಸೆಲ್ ದರ ಹೆಚ್ಚಿಸಿ ಜನರಿಗೆ ಹೊರೆಯಾಗಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಭೀಮ ಹೆಜ್ಜೆ-ನೂರರ ಸಂಭ್ರಮ
ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಬೆಳಗಾವಿ ಜಿಲ್ಲೆಯ ನಿಪ್ಪಾಣಿಗೆ ಭೇಟಿ ನೀಡಿ ಏ. 10ರಂದು ನೂರು ವರ್ಷಗಳಾಗಲಿವೆ. ಇದರ ಸ್ಮರಣಾರ್ಥ ಬಿಜೆಪಿ ವತಿಯಿಂದ ಆಯೋಜಿಸಿರುವ ಭೀಮ ಹೆಜ್ಜೆ-ನೂರರ ಸಂಭ್ರಮ ಯಾತ್ರೆಗೆ ಏ. 11ರಂದು ಬೆಂಗಳೂರಿನಲ್ಲಿ ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಚಾಲನೆ ನೀಡಲಾಗುವುದು. ಈ ಯಾತ್ರೆ ಏ.13ರಂದು ಹುಬ್ಬಳ್ಳಿಗೆ ಆಗಮಿಸಲಿದೆ. 15ರಂದು ಬೆಳಗಾವಿ ನಿಪ್ಪಾಣಿಗೆ ತಲುಪಲಿದ್ದು, ಅಲ್ಲಿ ಬೃಹತ್ ಸಮಾವೇಶ ಮಾಡಲಾಗುವುದು ಎಂದು ತಿಳಿಸಿದರು.
ಜನಾಕ್ರೋಶ ಯಾತ್ರೆ, ಭೀಮ-ಹೆಜ್ಜೆ ನೂರರ ಸಂಭ್ರಮ ಬಿಜೆಪಿಯ ಸಂಘಟನಾತ್ಮಕ ಕಾರ್ಯಕ್ರಮವಾಗಿದೆ. ಇದಕ್ಕೆ ಜೆಡಿಎಸ್ ಪಕ್ಷವನ್ನು ಜೋಡಿಸಿಕೊಂಡಿಲ್ಲ. ಎನ್ಡಿಎ ವತಿಯಿಂದ ಯಾವುದೋ ಹೋರಾಟ, ಕಾರ್ಯಕ್ರಮಗಳಿಗೆ ಜೆಡಿಎಸ್ ಭಾಗವಾಗಿರುತ್ತದೆ ಎಂದು ಹೇಳಿದರು.