ಜನಸ್ಪಂದನಾ ಸಭೆಗೆ ದೂರು ನೀಡಲು ಬರುತ್ತಿದ್ದವರ ಮೇಲೆ ಹಲ್ಲೆ

Published on

ಹಾಸನ: ಜಮೀನು ವಿವಾದ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡರ ಜನಸ್ಪಂದನಾ ಸಭೆಗೆ ದೂರು ನೀಡಲು ಕಾರಿನಲ್ಲಿ ಬರುತ್ತಿದ್ದವರ ಮೇಲೆ ಅರಕಲಗೂಡು ತಾಲೂಕಿನ, ವಡ್ಡರಹಳ್ಳಿ ಗ್ರಾಮದಲ್ಲಿ ಮಾರಕಾಸ್ತ್ರಗಳಿಂದ ದಾಳಿ ನಡೆಸಲಾಗಿದೆ.

ಜಮೀನು ವಿವಾದ ಹಿನ್ನೆಲೆಯಲ್ಲಿ ಎರಡು ಕುಟುಂಬಗಳ ನಡುವೆ ಗಲಾಟೆ ನಡೆಯುತ್ತಿದ್ದು, ಮಾರಕಾಸ್ತ್ರಗಳನ್ನು ಹಿಡಿದು ಒಂದು ಕುಟುಂಬ ದಾಳಿ ನಡೆಸಿದೆ. ಲಾಂಗ್, ದೊಣ್ಣೆಗಳನ್ನು ಹಿಡಿದು ಕಾರಿನಲ್ಲಿ ಬರುತ್ತಿದ್ದ ಐವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ವಿಠ್ಠಲ, ನಿಂಗರಾಜಮ್ಮ, ರಾಜಶೇಖರ್ ಸೇರಿ ಐವರು ಹಲ್ಲೆಗೊಳಗಾಗಿದ್ದಾರೆ. ರಾಜಶೇಖರ್ ಎಂಬುವವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ.

ನಿಂಗರಾಜಮ್ಮ ಅವರ ಹೆಸರಿನಲ್ಲಿದ್ದ ಮೂರು ಎಕರೆ 19 ಗುಂಟೆ ಜಾಗವನ್ನು ನಿಂಗರಾಜಮ್ಮ ಬದುಕಿದ್ದಾಗಲೇ ಅಕ್ರಮವಾಗಿ ಡೆತ್ ಸರ್ಟಿಫಿಕೇಟ್ ಪಡೆದು ಅವರ ಅಣ್ಣನ ಮಕ್ಕಳು 19 ಗುಂಟೆ ಜಮೀನು ಖಾತೆ ಮಾಡಿಕೊಂಡಿದ್ದರು. ಇದೇ ವಿಚಾರವಾಗಿ ಲೋಕಾಯುಕ್ತಕ್ಕೆ ನಿಂಗರಾಜಮ್ಮ ಅವರ ಪುತ್ರ ವಿಠ್ಠಲ ದೂರು ನೀಡಿದ್ದರು. ಸಚಿವರ ಜನಸ್ಪಂದನ ಸಭೆಗೆ ಕಾರಿನಲ್ಲಿ ಬರುವಾಗ ವಿಠ್ಠಲ ಅವರ ಕಾರಿನ ಮೇಲೆ ದಾಳಿ ಮಾಡಿ ಕಾರಿನೊಳಗಿದ್ದವರ ಮೇಲೆ ಮನಬಂದಂತೆ ಹಲ್ಲೆ ನಡೆಸಿ, ಕಾರು ಜಖಂಗೊಳಿಸಲಾಗಿದೆ.

ನಿಂಗರಜಮ್ಮನ ಅಣ್ಣ ಹಾಲಪ್ಪ, ಅವರ ಮಕ್ಕಳಾದ ರಾಜಪ್ಪ, ರತನ್ ಸೇರಿ 18 ಜನರು ದಾಳಿ ನಡೆಸಿದ್ದಾರೆ ಎಂದು ಹೇಳಲಾಗಿದೆ. ಹಲ್ಲೆ ನಡೆಸುವ ವಿಡಿಯೋ ಮೊಬೈಲ್‌ನಲ್ಲಿ ಸೆರೆಯಾಗಿದೆ. ಕೊಣನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಪ್ರಕರಣ ಸಂಬಂಧ ಇದುವರೆಗೆ ದೂರು ದಾಖಲಾಗಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net