ಜನಸ್ನೇಹಿ ಸಂಸದನಾಗಿ ಕಷ್ಟ-ಸುಖಗಳಲ್ಲಿ ಭಾಗಿಯಾಗುವೆ: ಶ್ರೇಯಸ್ ಪಟೇಲ್ ಅಭಯ

ಜನಸ್ನೇಹಿ ಸಂಸದನಾಗಿ ಕಷ್ಟ-ಸುಖಗಳಲ್ಲಿ ಭಾಗಿಯಾಗುವೆ: ಶ್ರೇಯಸ್ ಪಟೇಲ್ ಅಭಯ
Published on

ಹಾಸನ: ನಾನೊಬ್ಬ ಜನಸ್ನೇಹಿ ಸಂಸದನಾಗಿ ನಿಮ್ಮೆಲ್ಲ ಕಷ್ಟ-ಕಾರ್ಪಣ್ಯ, ನೋವು-ನಲಿವುಗಳಲ್ಲಿ ಭಾಗಿಯಾಗುತ್ತೇನೆ ಎಂದು ಸಂಸದ ಶ್ರೇಯಸ್ ಪಟೇಲ್ ಆಶ್ವಾಸನೆ ನೀಡಿದ್ದಾರೆ.
ನಗರದ ರವೀಂದ್ರ ನಗರದಲ್ಲಿರುವ ಸವಿತಾ ಸಮಾಜದ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಸವಿತಾ ಸಮಾಜ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸವಿತಾ ಸಮಾಜದಂತಹ ಸಣ್ಣಪುಟ್ಟ ಸಮುದಾಯಗಳನ್ನು ಮೇಲೆ ತರುವುದು ಜನಪ್ರತಿನಿಧಿಗಳ ಜವಾಬ್ದಾರಿಯಾಗಿದೆ. ಮುಂದಿನ ದಿನಗಳಲ್ಲಿ ಸವಿತಾ ಸಮಾಜಕ್ಕೆ ಇನ್ನೂ ಹೆಚ್ಚಿನ ಬಲ ತುಂಬುವ ಕಾರ್ಯಗಳನ್ನು ಮಾಡಲಾಗುವುದು ಎಂದು ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಜಿಲ್ಲಾ ಉಸ್ತುವಾರ ಸಚಿವ ರಾಜಣ್ಣ ಹಾಗೂ ಜಿಲ್ಲೆಯ ಮತದಾರರ ನೆರವಿನಿಂದ ನಾನು ಸಂಸದನಾಗಿದ್ದೇನೆ. ನಾನು ಸಂಸದ ಮಾತ್ರನಲ್ಲ, ಶ್ರೇಯಸ್ ನಿಮ್ಮ ಮನೆಯ ಮಗ ಎಂದು ತಿಳಿದು, ಯಾವುದೇ ಕೆಲಸಗಳಿಗೆ ನೇರವಾಗಿ ಬಂದು ನನ್ನನ್ನು ಕಾಣುವಂತೆ ನೆರೆದಿದ್ದ ಸಾರ್ವಜನಿಕರಿಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಸವಿತಾ ಸಮಾಜ ಸಹಕಾರ ಸಂಘದ ಅಧ್ಯಕ್ಷ ರವಿಕುಮಾರ್, ಸಮಾಜದ ತಾಲೂಕು ಅಧ್ಯಕ್ಷ ವೆಂಕಟೇಶ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net