

ಹಿರಿಯೂರು: ಸರ್ಕಾರದ ಸೌಲಭ್ಯ, ಸೇವೆಗಳನ್ನು ಜನರ ಮನೆ ಬಾಗಿಲಿಗೆ ತಲಿಪಿಸಲು ಜನಸ್ನೇಹಿ ಆಡಳಿತದ ಸಂಕಲ್ಪ ಮಾಡಿದ್ದು, ಪ್ರತಿ ವಾರ ಜನ ಸಂಪರ್ಕ ಸಭೆ ಮೂಲಕ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಸಚಿವ ಡಿ.ಸುಧಾಕರ್ ಭರವಸೆ ನೀಡಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಸಾರ್ವಜನಿಕರ ಸಮಸ್ಯೆ ಆಲಿಸಿ, ಹಲವು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಸೂಚಿಸಿ ಮಾತನಾಡಿದರು.
ಹೈಟೆಕ್ ಆಸ್ಪತ್ರೆ, ಸಾರಿಗೆ ಡಿಪೋ, ಧರ್ಮಪುರ ಫೀಡರ್ ನಾಲೆ, ರಸ್ತೆ ವಿಸ್ತರಣೆ ಕಾಮಗಾರಿ ಪ್ರಗತಿಯಲ್ಲಿದ್ದು, ಕಾಲಮಿತಿಯಲ್ಲಿ ಪೂರ್ಣಗೊಳಿಸಲಾಗುವುದು. ಕಂದಾಯ, ಕೃಷಿ, ತಾಪಂ, ತೋಟಗಾರಿಕೆ ಇತರ ಇಲಾಖೆಗಳನ್ನು ಜನಸ್ನೇಹಿಯಾಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಪಡಿತರ ಚೀಟಿ, ಸಾಗುವಳಿ ಪತ್ರ, ಪಿಂಚಣಿ, ಪಹಣಿ ಸಮಸ್ಯೆ, ವಸತಿ, ಕುಡಿವ ನೀರು, ಚರಂಡಿ ವ್ಯವಸ್ಥೆ, ಬಿತ್ತನೆ ಬೀಜ, ಬೆಳೆವಿಮೆ ಇತರ ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ಸಚಿವರ ಗಮನ ಸೆಳೆದರು.
ತಾಲೂಕಿನ ವಿವಿಧೆಡೆಯಿಂದ ಆಗಮಿಸಿದ್ದ ಸಾರ್ವಜನಿಕರು, ವಿದ್ಯಾರ್ಥಿಗಳು, ಪಕ್ಷದ ಕಾರ್ಯಕರ್ತರ ಅಹವಾಲು ಸಚಿವರು ಆಲಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ್, ಜಿಪಂ ಮಾಜಿ ಸದಸ್ಯ ಆರ್.ನಾಗೇಂದ್ರನಾಯ್ಕ, ಮುಖಂಡರಾದ ಜ್ಞಾನೇಶ್, ಗುರು, ಶಿವಕುಮಾರ್, ಕಲ್ಲಹಟ್ಟಿ ಹರೀಶ್, ಡಾ.ಜೆ.ಸುಜಾತಾ, ಜಿ.ಪ್ರೇಮ್‌ಕುಮಾರ್, ಅಶೋಕ್, ಜಿ.ದಾದಾಪೀರ್, ಪಿ.ಎಸ್.ಸಾದತ್‌ವುಲ್ಲಾ, ಗುಂಡೇಶ್ ಕುಮಾರ್, ನಗರಸಭೆ ಸದಸ್ಯರಾದ ವಿಠ್ಠಲ್ ಪಾಂಡುರಂಗ, ಈ.ಮಂಜುನಾಥ್, ಮಮತಾ, ಟಿ.ಚಂದ್ರಶೇಖರ್, ಕೃಷ್ಣಮೂರ್ತಿ ಇತರರಿದ್ದರು.