ವಿಶೇಷ ಭಾಗ್ಯಗಳಿಗೆ ಬೇರೆ ಯೋಜನೆ ಅನುದಾನ ದುರ್ಬಳಕೆ

my soil my country
ವಿಜಯಪುರ ನಗರದ ವಜ್ರಹನುಮಾನ ದೇವಸ್ಥಾನದ ಬಳಿಯ ಉದ್ಯಾನವನದಲ್ಲಿ ಬಿಜೆಪಿ ಜಿಲ್ಲಾ ಘಟಕದಿಂದ ಹಮ್ಮಿಕೊಂಡಿದ್ದ ನನ್ನ ಮಣ್ಣು-ನನ್ನ ದೇಶ ಅಭಿಯಾನದಲ್ಲಿ ಭಾಗವಹಿಸಿ ರಾಜ್ಯ ಬಿಜೆಪಿ ಕಾರ್ಯದರ್ಶಿ ಜಗದೀಶ ಹಿರೇಮನಿ ಮಾತನಾಡಿದರು. ಸಂಸದ ರಮೇಶ ಜಿಗಜಿಣಗಿ, ಮಾಜಿ ಸಚಿವರ ಎಸ್.ಕೆ. ಬೆಳ್ಳುಬ್ಬಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿರ್ಜುನ ಜೋಗೂರ, ನಗರ ಮಂಡಲ ಅಧ್ಯಕ್ಷ ಮಳುಗೌಡ ಪಾಟೀಲ, ಬಿಜೆಪಿ ಮುಖಂಡ ವಿಜುಗೌಡ ಪಾಟೀಲ, ಸಂಜೀವ ಐಹೊಳ್ಳಿ, ಮಹಾನಗರ ಪಾಲಿಕೆ ಸದಸ್ಯ ಶಿವರುದ್ರ ಬಾಗಲಕೋಟ, ಬಸವರಾಜ ಬಿರಾದಾರ, ವಿಜಯ ಜೋಶಿ ವೇದಿಕೆಯಲ್ಲಿ ಇದ್ದರು.
Published on

ವಿಜಯಪುರ: ಕೇಂದ್ರದಲ್ಲಿ ಉತ್ತಮ ಆಡಳಿತವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ನೀಡಿದ್ದಾರೆ. ಆದರೆ ರಾಜ್ಯದಲ್ಲಿ ಇಂದು ಪರಿಸ್ಥಿತಿ ಹೇಗಿದೆ ಎನ್ನುವುದು ರಾಜ್ಯದ ಜನರಿಗೆ ತಿಳಿದಂತಾಗಿದೆ. ಕೇವಲ ಐದು ಗ್ಯಾರಂಟಿ ಭಾಗ್ಯಗಳ ಗುರಿಯಿಟ್ಟುಕೊಂಡು ಇನ್ನುಳಿದ ಎಲ್ಲಾ ವಿಚಾರದಲ್ಲಿ ಅಧೋಗತಿಗೆ ತೆಗೆದುಕೊಂಡು ಹೋಗುವಂತಹ ಸ್ಥಿತಿ ರಾಜ್ಯ ಕಾಂಗ್ರೆಸ್ ಮಾಡುತ್ತಿದೆ ಎಂದು ರಾಜ್ಯ ಬಿಜೆಪಿ ಕಾರ್ಯದರ್ಶಿ ಜಗದೀಶ ಹಿರೇಮನಿ ವಾಗ್ದಾಳಿ ನಡೆಸಿದರು.

ಶನಿವಾರ ನೂತನ ಪ್ರವಾಸಿ ಮಂದಿರದಲ್ಲಿ ನನ್ನ ದೇಶ ನನ್ನ ಮಣ್ಣು ಅಭಿಯಾನದ ಕುರಿತಾಗಿ ಮಾಹಿತಿ ನೀಡುವ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರಿಗೆ ಕೊಡುವ ಅನುದಾನ ಕಡಿತಗೊಳಿಸಿದ್ದಾರೆ. ದಲಿತರಿಗೆ ಕೊಡಬೇಕಾದ ಹಣವನ್ನು ವಿಶೇಷ ಭಾಗ್ಯಗಳಿಗೆ ನೀಡಿದ್ದಾರೆ. ರೈತರ ಮಕ್ಕಳಿಗೆ ಕೊಡಬೇಕಾದಂತಹ ವಿದ್ಯಾನಿಧಿ ಯೋಜನೆ ಸಹ ಇನ್ನೂ ಆರಂಭಿಸಿಲ್ಲ ಎಂದರು.

ಇದು ಜನಸಾಮಾನ್ಯರಿಗೆ, ರೈತರಿಗೆ, ದಲಿತರಿಗೆ ಅನುಕೂಲಕರವಾಗಿರುವ ಎಲ್ಲಾ ಯೋಜನೆಗಳನ್ನು ನಿಲ್ಲಿಸಿ ಯಾವ ಪುರುಷಾರ್ಥಕ್ಕೆ ಆ ಎಲ್ಲಾ ಹಣ ಬಳಕೆ ಮಾಡಿಕೊಂಡು ತಮ್ಮ ಪ್ರಮುಖ ಐದು ಯೋಜನೆಗಳಿಗೆ ಮಾತ್ರ ಸೀಮಿತವಾಗಿದ್ದಾರೆ. ರಾಜ್ಯದ ಅಭಿವೃದ್ದಿಗೆ ಒಂದೇ ಒಂದು ರೂ. ಅನುದಾನವನ್ನು ಈ ರಾಜ್ಯ ಸರಕಾರ ಕೊಡುತ್ತಿಲ್ಲ. ಒಟ್ಟು ನಿಷ್ಕ್ರೀಯವಾಗಿ ರಾಜ್ಯ ಸರಕಾರ ಕೆಲಸ ಮಾಡುತ್ತಿದೆ ಎಂದರು.

ಜನಸಾಮಾನ್ಯರಿಗೆ ಹೆಚ್ಚು ಹೊರೆ ಹಾಕುವಂತಹ ಜನಸಾಮಾನ್ಯರನ್ನು ಸಂಕಷ್ಟಕ್ಕೆ ಸಿಲುಕಿಸುವಂತಹ ರೀತಿಯಲ್ಲಿ ಇವತ್ತು ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ನಡೆದುಕೊಳ್ಳುತ್ತಿದೆ. ಹಾಗಾಗಿ ನಿನ್ನೆ ರಾಜ್ಯಾದ್ಯಂತ ಭಾರತೀಯ ಜನತಾ ಪಕ್ಷದಿಂದ ದೊಡ್ಡ ಪ್ರಮಾಣದಲ್ಲಿ ಹೋರಾಟ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನೂ ಹೋರಾಟ ಮಾಡುತ್ತೇವೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಸದ ರಮೇಶ ಜಿಗಜಿಣಗಿ, ಮಹನಾಗರಪಾಲಿಕೆ ಸದಸ್ಯ ಶಿವರುದ್ರ ಬಾಗಲಕೋಟ, ಮಲ್ಲಿಕಾರ್ಜುನ ಜೋಗೂರ, ಸಂಜಯ ಪಾಟೀಲ ಕನಮಡಿ, ಬಿಜೆಪಿ ಜಿಲ್ಲಾ ಮಾಧ್ಯಮ ಸಂಚಾಲಕ ವಿಜಯ ಜೋಷಿ ಉಪಸ್ಥಿತರಿದ್ದರು.
ನನ್ನ ಮಣ್ಣು-ನನ್ನ ದೇಶ:
ನಂತರ ನಗರದ ವಜ್ರಹನುಮಾನ ದೇವಸ್ಥಾನದ ಬಳಿಯ ಉದ್ಯಾನವನದಲ್ಲಿ ಬಿಜೆಪಿ ಜಿಲ್ಲಾ ಘಟಕದಿಂದ ಹಮ್ಮಿಕೊಂಡಿದ್ದ ನನ್ನ ಮಣ್ಣು-ನನ್ನ ದೇಶ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಸಂಸದ ರಮೇಶ ಜಿಗಜಿಣಗಿ, ಭಾರತದ ಪವಿತ್ರ ಮಣ್ಣಿನೊಂದಿಗೆ ಪ್ರತಿಯೊಬ್ಬ ಭಾರತೀಯನ ಭಾವನಾತ್ಮಕ ಬೆಸುಗೆ ಇರಬೇಕು ಎಂದರು.

ಭಾರತ ಒಂದು ಪುಣ್ಯ ಭೂಮಿ, ಋಷಿಮುನಿಗಳ ತಪೋಭೂಮಿ, ನಿತ್ಯ ಈ ರಾಷ್ಟ್ರವನ್ನು ರಕ್ಷಿಸಲು ಸೈನಿಕರು ಅನೇಕ ತ್ಯಾಗ, ಬಲಿದಾನ ಮಾಡಿದ್ದಾರೆ, ದೇಶದ ಸ್ವಾತಂತ್ರೃತೆಗಾಗಿ ಅನೇಕರು ತಮ್ಮ ಜೀವನ ಬಲಿದಾನ ಮಾಡಿದ್ದಾರೆ, ಹೀಗಾಗಿ ಈ ಪುಣ್ಯಭೂಮಿಯಲ್ಲಿ ಜೀವಿಸುವ ಪುಣ್ಯ ನಮ್ಮದು ಎಂದರು.
ಬಿಜೆಪಿ ರಾಜ್ಯ ಕಾರ್ಯದರ್ಶಿ ಜಗದೀಶ ಹಿರೇಮನಿ ಮಾತನಾಡಿ, ಭಾರತದ ಮಣ್ಣಿನ ಕಣ ಕಣದಲ್ಲೂ ಪುಣ್ಯದ ಸ್ಪರ್ಶವಿದೆ, ಅದಕ್ಕೊಂದು ಭವ್ಯತೆಯ ಶಕ್ತಿ ಇದೆ, ಹೀಗಾಗಿ ಮಣ್ಣಿನೊಂದಿಗೆ ಭಾವನಾತ್ಮಕ ಬಾಂಧವ್ಯ ಬೆಸೆದುಕೊಳ್ಳಬೇಕು ಎಂದರು.

ನವದೆಹಲಿಯಲ್ಲಿ ವೀರಯೋಧರ ಸ್ಮರಣೆಗಾಗಿ ನಿರ್ಮಿಸಲಾಗುತ್ತಿರುವ ಉದ್ಯಾನವನಕ್ಕೆ ಈ ಮಣ್ಣು ಬಳಸಲಾಗುತ್ತದೆ, ರಾಜ್ಯದ 50 ಸಾವಿರ ಭೂತಗಳಿಂದ ಕಳಸದಲ್ಲಿ ಮಣ್ಣು ಸಂಗ್ರಹಿಸುವ ಸಂಕಲ್ಪ ಮಾಡಲಾಗಿದೆ ಎಂದರು.

ಮಾಜಿ ಸಚಿವರ ಎಸ್.ಕೆ. ಬೆಳ್ಳುಬ್ಬಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿರ್ಜುನ ಜೋಗೂರ, ನಗರ ಮಂಡಲ ಅಧ್ಯಕ್ಷ ಮಳುಗೌಡ ಪಾಟೀಲ, ಬಿಜೆಪಿ ಮುಖಂಡ ವಿಜುಗೌಡ ಪಾಟೀಲ, ಸಂಜೀವ ಐಹೊಳ್ಳಿ, ಮಹಾನಗರ ಪಾಲಿಕೆ ಸದಸ್ಯ ಶಿವರುದ್ರ ಬಾಗಲಕೋಟ, ಬಸವರಾಜ ಬಿರಾದಾರ, ವಿಜಯ ಜೋಶಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಭೀಮಾಶಂಕರ ಹದನೂರ, ಉಮೇಶ ಕಾರಜೋಳ, ಬಸವರಾಜ ಬೈಚಬಾಳ, ಚಿದಾನಂದ ಚಲವಾದಿ, ಸಂಜಯ ಪಾಟೀಲ (ಕನಮಡಿ), ಮಲ್ಲಮ್ಮ ಜೋಗೂರ, ಸುಮಂಗಲಾ ಕೋಟಿ, ಛಾಯಾ ಮಸೆಯನ್ನವರ, ಪಾಲಿಕೆ ಸದಸ್ಯರಾದ ರಾಹುಲ್ ಜಾಧವ, ರಾಜಶೇಖರ ಮಗಿಮಠ, ಪ್ರೇಮಾನಂದ ಬಿರಾದಾರ ಸೇರಿ ಹಲವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net