

ಹೊಳೆನರಸೀಪುರ: ಜನಪರ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಜನಸಾಮಾನ್ಯರ ಮನಸ್ಸಿನಲ್ಲಿ ನೆಲೆಸಿರುವಂತಹ ಹಿಂದುಳಿದ ವರ್ಗಗಳ ಹರಿಕಾರ ಡಿ.ದೇವರಾಜ ಅರಸು ಎಂದು ತಹಸೀಲ್ದಾರ್ ಕೆ.ಕೆ. ಕೃಷ್ಣಮೂರ್ತಿ ಬಣ್ಣಿಸಿದರು.
ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತ ಮತ್ತು ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಭಾನುವಾರ ಆಯೋಜಿಸಿದ್ದ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ 108ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೆಳಸ್ಥರದ, ಶೋಷಿತರ, ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಯೋಜನೆಗಳನ್ನು ರೂಪಿಸಿ ಬಡವರ ಕಲ್ಯಾಣಕ್ಕಾಗಿ ಶ್ರಮಿಸಿದಂತಹ ನೇತಾರ ಅರಸು. ಅವರು ಒಬ್ಬ ಆದರ್ಶ ರಾಜಕಾರಣಿಯಾಗಿ ದಿಟ್ಟ ಆಡಳಿತವನ್ನು ನೀಡುವ ಮೂಲಕ ಇತಿಹಾಸದ ಪುಟಗಳಲ್ಲಿ ನೆಲೆಸಿದ್ದಾರೆ ಎಂದು ಹೇಳಿದರು.
ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಲಿಂಗೇಗೌಡ ಮಾತನಾಡಿ, ಶೋಷಿತ ವರ್ಗದ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸೌಲಭ್ಯಗಳನ್ನು ನೀಡಿದ್ದರು. ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಹಾವನೂರು ಆಯೋಗವನ್ನು ರಚನೆ ಮಾಡಿ ದೇಶದಲ್ಲೇ ಮಾದರಿ ರಾಜಕಾರಣಿಯಾದರು. ರಾಜ್ಯಕ್ಕೆ ದೇವರಾಜ ಅರಸು ಅವರು ನೀಡಿರುವಂತಹ ಜನಪರ ಸೌಲಭ್ಯಗಳಿಂದ ಇಂದು ನಾವು ಅದರ ಫಲ ಪಡೆಯುತ್ತಿದ್ದೇವೆ. ಅರಸು ಅವರ ಪ್ರಾಮಾಣಿಕ, ನಿಸ್ವಾರ್ಥ ಆಡಳಿತದಿಂದ ಗೇಣಿ ಪದ್ಧತಿ, ಪಿಂಚಣಿ ಯೋಜನೆ, ಭಾಗ್ಯ ಜ್ಯೋತಿ, ಜೀತ ಪದ್ಧತಿ ನಿರ್ಮೂಲನೆ, ಭೂ ಸುಧಾರಣೆ ಕಾಯ್ದೆಯಂತ ಹಲವಾರು ಸೌಲಭ್ಯಗಳನ್ನು ಜಾತ್ಯತೀತವಾಗಿ ಒದಗಿಸಿದಂತಹ ಅಭಿವೃದ್ಧಿಯ ಹರಿಕಾರ ಎಂದು ಬಣ್ಣಿಸಿದರು.
ಸಹಾಯಕ ಕೃಷಿ ನಿರ್ದೇಶಕಿ ಕೆ.ಎಚ್.ಸಪ್ನಾ ಮಾತನಾಡಿ, ಅರಸು ಅವರು ಮುಖ್ಯಮಂತ್ರಿಯಾಗಿ ರಾಜ್ಯದ ಅಭಿವೃದ್ಧಿಗೆ ಉತ್ತಮ ಅಡಿಪಾಯ ಹಾಕಿದ್ದಾರೆ. ವಿಶೇಷ ಕಾಳಜಿಯಿಂದ ಸಮಾಜದ ಎಲ್ಲರೂ ಪಾಲಿಸುವಂತಹ ಆದರ್ಶ ಮೌಲ್ಯಗಳನ್ನು ಕೊಡುಗೆಯಾಗಿ ನೀಡಿದ್ದಾರೆ ಎಂದು ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಕೌಸರ್, ಹಿಂದುಳಿದ ವರ್ಗಗಳ ಇಲಾಖೆ ಅಧಿಕಾರಿ ಮಂಜುನಾಥ್, ನಾಗರಾಜು, ನಿಲಯ ಮೇಲ್ವಿಚಾರಕಿ ಜ್ಞಾನೇಶ್ವರಿ, ತ್ರಿವೇಣಿ, ರಮ್ಯಾ ಇತರರು ಇದ್ದರು.