

ಬೀದರ್: ಕನ್ನಡ ಸಾಹಿತ್ಯ ಪರಿಷತ್ಗೆ ಹೊರ ರೂಪ ಕೊಟ್ಟು, ಜನಸಾಮಾನ್ಯರ ಪರಿಷತ್ತು ಆಗಿ ಮಾಡುವುದು ತಮ್ಮ ಧ್ಯೇಯವಾಗಿದೆ ಎಂದು ಅಧ್ಯಕ್ಷ ಸ್ಥಾನ ಸ್ಪರ್ಧಿಯಾಗಿರುವ ದೂರದರ್ಶನ ಕೇಂದ್ರದ ನಿವೃತ್ತ ನಿರ್ದೇಶಕ, ನಾಡೋಜ ಡಾ.ಮಹೇಶ ಜೋಶಿ ಹೇಳಿದರು.
ಪರಿಷತ್ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ. ಇದಕ್ಕೆ ಇನ್ನಷ್ಟು ಶಕ್ತಿ ತುಂಬಿ ನಾಡು ಮತ್ತು ನುಡಿ ಸೇವೆಗೆ ಹಲವು ಕಾರ್ಯಕ್ರಮ ನಡೆಸುವ ಉದ್ದೇಶವಿದೆ. ಕನ್ನಡಿಗರು ಸಂಪೂರ್ಣ ಸಹಕಾರ ನೀಡಿ ಆಶೀರ್ವಾದ ಮಾಡುವ ವಿಶ್ವಾಸವಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪರಿಷತ್ತಿಗೆ ಹೆಚ್ಚಿನ ಸದಸ್ಯತ್ವ ಗುರಿಯಿದೆ. ಸದಸ್ಯತ್ವ ಶುಲ್ಕ ಈಗಿರುವ 500 ರೂ. ಬದಲಾಗಿ ಮತ್ತೆ 250ಕ್ಕೆ ಇಳಿಸಲಾಗುವುದು. ಸದಸ್ಯತ್ವ ನೋಂದಣಿಗೆ ಹೊಸ ಆ್ಯಪ್ ಸಿದ್ಧಪಡಿಸಲಾಗುವುದು. ವಿದ್ಯಾರ್ಥಿಗಳು ಸೇರಿದಂತೆ 18-35 ವರ್ಷದೊಳಗಿನವರಿಗೆ ರೂ. 100 ಮಾತ್ರ ಸದಸ್ಯತ್ವ ಶುಲ್ಕ ನಿಗದಿಪಡಿಸಲಾಗುವುದು. ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವವರು, ಮಾಜಿ ಯೋಧರು ಹಾಗೂ ಅಂಗವಿಕಲರಿಗೆ ಉಚಿತ ಸದಸ್ಯತ್ವ ಕೊಡುವುದಾಗಿ ತಮ್ಮ ಕಾರ್ಯಯೋಜನೆ ವಿವರಿಸಿದರು.
ಭಾರತರತ್ನ ವಿಜ್ಞಾನಿ ಸಿ.ಎನ್.ಆರ್.ರಾವ್ ಅವರಂಥ ಅತ್ಯುನ್ನತ ಸಾಧಕ ಕನ್ನಡಿಗರನ್ನು ಪರಿಷತ್ ರಾಯಭಾರಿ ಮಾಡಲಾಗುವುದು. ಐದು ವರ್ಷದಲ್ಲಿ ನಡೆವ ಅಖಿಲ ಭಾರತ ಮಟ್ಟದ 5 ಸಮ್ಮೇಳನಗಳಲ್ಲಿ ಎರಡಕ್ಕೆ ಮಹಿಳಾ ಸಾಹಿತಿಗೆ ಸರ್ವಾಧ್ಯಕ್ಷ ಸ್ಥಾನ ವಹಿಸಲಾಗುತ್ತದೆ. ಸುಪ್ರೀಂಕೋಟ್೯ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಭೆ ನಡೆಸಿ 1915ರಿಂದ ಈವರೆಗೆ ಹಾಗೆಯೇ ಇರುವ ಪರಿಷತ್ನ ನಿಯಮಗಳನ್ನು ಪರಿಷ್ಕರಿಸಲಾಗುವುದು ಎಂದರು.
ಭೂಮಿಪೂಜೆ ಆಗಿರುವ ಬೀದರ್ ನ ಜಿಲ್ಲಾ ಕನ್ನಡ ಭವನ ಕಾಲಮಿತಿಯಲ್ಲಿ ಪೂರ್ಣಗೊಳಿಸಲಾಗುವುದು. ಎಲ್ಲ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲೂ ಕನ್ನಡ ಭವನ ನಿರ್ಮಿಸಲಾಗುವುದು ಎಂದು ಹೇಳಿದರು. ಪ್ರಚಾರ ಪ್ರಮುಖ ರಾಮಲಿಂಗ ಶೆಟ್ಟಿ ಇದ್ದರು.
ಠಾಣೆಗೆ ಹಂಪನಾ
ಕರೆಸಿದ್ದಕ್ಕೆ ಖಂಡನೆ
ಪ್ರತಿಯೊಬ್ಬರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ. ಸಾಹಿತಿ ಡಾ. ಹಂ.ಪ.ನಾಗರಾಜಯ್ಯ ಅವರನ್ನು ಮಂಡ್ಯದಲ್ಲಿ ಪೊಲೀಸ್ ಠಾಣೆಗೆ ಕರೆಯಿಸಿ ವಿಚಾರಣೆ ನಡೆಸಿರುವುದು ಖಂಡನೀಯ ಎಂದು ನಾಡೋಜ ಡಾ.ಮಹೇಶ ಜೋಶಿ ಹೇಳಿದರು. ಡಾ.ಹಂಪನಾ ಹಿರಿಯ ಸಾಹಿತಿ. ಅವರನ್ನು ಠಾಣೆಗೆ ಕರೆಸುವ ಅವಶ್ಯಕತೆ ಇರಲಿಲ್ಲ. ಅಗತ್ಯ ಬಿದ್ದರೆ ಪೊಲೀಸರು ಅವರ ಮನೆಗೆ ಹೋಗಬಹುದಿತ್ತು. ಸರ್ಕಾರದ ಈ ಕ್ರಮ ಸರಿಯಲ್ಲ. ಈ ವಿಷಯ ಸಂಬಂಧ ಒಂದು ವೇಳೆ ಹೋರಾಟ ಮಾಡಬೇಕಾದ ಅಗತ್ಯಬಿದ್ದರೆ ನಾನೇ ಮುಂದಾಳತ್ವ ವಹಿಸುವೆ ಎಂದರು. ಕನ್ನಡ ನಾಡು, ನುಡಿ, ಜಲಕ್ಕೆ ಧಕ್ಕೆ ಉಂಟಾದರೆ ಮೊದಲ ಸಾಲಿನಲ್ಲಿ ನಿಂತು ಪ್ರತಿಭಟನೆ ನಡೆಸುವೆ. ಬೆಳಗಾವಿಯಲ್ಲಿ ಎಂಇಎಸ್ ಮಾಡುತ್ತಿರುವುದು ತಪ್ಪು. ಪ್ರೀತಿ, ವಿಶ್ವಾಸದಿಂದ ಗಡಿ ವಿವಾದ ಬಗೆಹರಿಸಿಕೊಳ್ಳಬೇಕಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸೇವಾ ನಿವೃತ್ತಿ ನಂತರ 2017ರಲ್ಲಿ ಕಸಾಪ ಚುನಾವಣೆಗೆ ಸ್ಪರ್ಧಿಸಲು ಯೋಜಿಸಿದ್ದೆ. ಆದರೆ ಅವಧಿಯು ಐದು ವರ್ಷಕ್ಕೆ ವಿಸ್ತರಣೆ ಆಗಿರುವ ಕಾರಣ ಸಾಧ್ಯವಾಗಲಿಲ್ಲ. ಇದೀಗ ಸ್ಪರ್ಧೆಗಿಳಿಯಲು ಎಲ್ಲ ಸಿದ್ಧತೆ ಮಾಡಿಕೊಂಡಿದ್ದೇನೆ. ಮೇ ಎರಡನೇ ವಾರ ಚುನಾವಣೆ ನಡೆಯುವ ಸಾಧ್ಯತೆಗಳಿವೆ.| ನಾಡೋಜ ಡಾ. ಮಹೇಶ ಜೋಶಿಕಸಾಪ ಅಧ್ಯಕ್ಷ ಸ್ಥಾನ ಸ್ಪರ್ಧಿ