ಜನಸಾಗರ ಕಂಡು ನಾನೇ ಹೊರಬಂದೇ

Published on

ಚಾಮರಾಜನಗರ: ಬೆಂಗಳೂರಿನ ವಿಧಾನಸೌಧದ ಮುಂಭಾಗ ಆಯೋಜಿಸಿದ್ದ ಐಪಿಎಲ್ ವಿಜೇತ ತಂಡದ ಸನ್ಮಾನ ಕಾರ್ಯಕ್ರಮದಲ್ಲಿ ನೆರೆದಿದ್ದ ಜನಸಾಗರವನ್ನು ಕಂಡು ನಾನೇ ಕಾರ್ಯಕ್ರಮದಿಂದ ಹೊರಬಂದೇ ಎಂದು ಎಂಎಸ್‌ಐಎಲ್ ಅಧ್ಯಕ್ಷ ಹಾಗೂ ಶಾಸಕ ಸಿ.ಪುಟ್ಟರಂಗಶೆಟ್ಟಿ ಹೇಳಿದರು.

ನಗರರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ರಾಜ್ಯ ಸರ್ಕಾರದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಅಷ್ಟು ಸಂಖ್ಯೆಯಲ್ಲಿ ಜನರು ಭಾಗವಹಿಸುತ್ತಾರೆ ಎಂದು ಯಾರು ನಿರೀಕ್ಷೆ ಮಾಡಿರಲಿಲ್ಲ. ನಿರೀಕ್ಷೆಗೂ ಮೀರಿ ಜನರು ಕಾರ್ಯಕ್ರಮದಲ್ಲಿ ಸೇರಿದ್ದರು. ಆ ಜನಸಾಗರವನ್ನು ಕಂಡು ಶಾಸಕನಾದ ನಾನೇ ಹೊರಗೆ ಬಂದುಬಿಟ್ಟೆ. ಕ್ರೀಡಾಂಗಣದ ಬಳಿ ಉಂಟಾದ ಕಾಲ್ತುಳಿತ ಪ್ರಕರಣವನ್ನು ಯಾರು ಕೂಡ ನಿರೀಕ್ಷೆ ಮಾಡಿರಲಿಲ್ಲ. ಈಗಾಗಲೇ ರಾಜ್ಯಸರ್ಕಾರ ಈ ಸಂಬಂಧ ತನಿಖೆ ಕೈಗೊಂಡಿದೆ. ಇದು ಆಕಸ್ಮಿಕವಾಗಿ ನಡೆದು ಹೋಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಆಕ್ಸಿಜನ್ ಸಂತ್ರಸ್ತರಿಗೆ ಸೂಕ್ತ ರೀತಿಯಲ್ಲಿ ಉದ್ಯೋಗ ಹಾಗೂ ಪರಿಹಾರ ವಿತರಿಸದೇ ಇರುವ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿ, ರಾಜ್ಯ ಸರ್ಕಾರ ಆಕ್ಸಿಜನ್ ಸಂತ್ರಸ್ತರಿಗೆ ಸರ್ಕಾರಿ ಉದ್ಯೋಗ ನೀಡುವ ಭರವಸೆಯನ್ನು ನೀಡಿತ್ತು. ಕೆಲವರು ಗುತ್ತಿಗೆ ಆಧಾರದಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಹೆಚ್ಚಿನ ರೀತಿಯಲ್ಲಿ ಪರಿಹಾರ ನೀಡುವ ಕುರಿತು ಸರ್ಕಾರದ ಹಂತದಲ್ಲಿ ಮಾತುಕತೆ ನಡೆಯುತ್ತಿದ್ದು, ಶೀಘ್ರದಲ್ಲೇ ಸಮಸ್ಯೆ ಬಗೆಹರಿಸಲಿದ್ದೇವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net