

ಮದ್ದೂರು: ನಮ್ಮೂರಿಗೆ ಬಸ್ ಬರುತ್ತಿಲ್ಲ, ನಾಡಕಚೇರಿಗೆ ನಿತ್ಯ ಅಲೆದಾಡುವ ಪರಿಸ್ಥಿತಿ, ನಾಲೆಗಳ ಆಧುನಿಕರಣ ಮಾಡಿಕೊಡಿ, ಬಸ್ ತಂಗು ತಾಣ ಹಾಗೂ ಶೌಚಗೃಹ ನಿರ್ಮಿಸಿ ಕೊಡಿ ಎಂ ಎಂಬ ಹಲವು ಸಮಸ್ಯೆಗಳನ್ನು ಚಾಮನಹಳ್ಳಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರು ಶಾಸಕ ಕೆ.ಎಂ.ಉದಯ್ ಅವರಲ್ಲಿ ಅವಲತ್ತುಕೊಂಡರು.
ತಾಲೂಕಿನ ಚಾಮನಹಳ್ಳಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ನಗರಕೆರೆ, ಗೊರವನಹಳ್ಳಿ ಹಾಗೂ ಕ್ಯಾತಘಟ್ಟ ಗ್ರಾಪಂ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಶನಿವಾರ ಶಾಸಕ ಕೆ.ಎಂ.ಉದಯ್ ಅಧಿಕಾರಿಗಳೊಟ್ಟಿಗೆ ಶನಿವಾರ ಪ್ರವಾಸ ಕೈಗೊಂಡು ಜನಸಂಪರ್ಕ ಸಭೆ ನಡೆಸಿದ ಸಂದರ್ಭದಲ್ಲಿ ಸಾರ್ವಜನಿಕರು ಸಮಸ್ಯೆಗಳ ಸರಮಾಲೆಯನ್ನೇ ಬಿಚ್ಚಿಟ್ಟರು. ನಂತರ ಸ್ಥಳೀಯ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಸಮಸ್ಯೆಗಳನ್ನು ಬಗೆಹರಿಸುವ ಭರವಸೆ ನೀಡಿದರು.
ಕೆ.ಹೊನ್ನಲಗೆರೆ ಗ್ರಾಮದಲ್ಲಿ ನಾಡಕಚೇರಿ ಇದ್ದು ನಗರಕೆರೆ ಭಾಗದ ಜನರು ದಿನನಿತ್ಯದ ಕೆಲಸ ಕಾರ್ಯಗಳಿಗೆ ದೂರದ ಗ್ರಾಮಕ್ಕೆ ತೆರಳಬೇಕಾದ ಅನಿವಾರ್ಯತೆ ಉಂಟಾಗಿದ್ದು ಕೂಡಲೇ ನಾಡಕಚೇರಿಯ ಉಪ ಕಚೇರಿಯನ್ನು ತೆರೆಯಬೇಕು. ಪ್ರಯಾಣಿಕರು, ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂಬ ಉದ್ದೇಶದಿಂದ ಪಟ್ಟಣದ ಶ್ರೀ ಗುರುಶಾಂತಪ್ಪ ತಾಲೂಕು ಆಸ್ಪತ್ರೆ, ಹಾಗೂ ಕೆಮ್ಮಣ್ಣು ನಾಲೆ ವೃತ್ತದ ಬಳಿ ಬಸ್ ತಗುಂದಾಣ ಮತ್ತು ಹೈಟೆಕ್ ಶೌಚಗೃಹ ನಿರ್ಮಿಸಿ ಅನುಕೂಲ ಕಲ್ಪಿಸಬೇಕು ಎಂದು ಸಾರ್ವಜನಿಕರು ಮನವಿ ಮಾಡಿದರು.
ಕಳೆದ ಹಲವಾರು ವರ್ಷಗಳಿಂದಲೂ ಕೆಮ್ಮಣ್ಣು ನಾಲೆ ಅಧ್ವಾನಗೊಂಡಿದ್ದು ಅವ್ಯವಸ್ಥೆಯಿಂದ ಕೂಡಿರುವ ಕೆಮ್ಮಣ್ಣು ನಾಲೆಯನ್ನು ಆಧುನಿಕರಣಗೊಳಿಸಿ 15 ಗ್ರಾಮಗಳಿಗೆ ಬೇಸಾಯ ಮಾಡಲು ಅನುಕೂಲ ಕಲ್ಪಿಸುವಂತೆ ಕೀಲಾರ ಮತ್ತು ಮದ್ದೂರಮ್ಮ ಕೆರೆ ಹೂಳೆತ್ತಿಸಿ ಹೆಚ್ಚು ನೀರು ಸಂಗ್ರಹಣೆ ಮಾಡುವ ನಿಟ್ಟಿನಲ್ಲಿ ಶಾಸಕರು ಕೆರೆಗಳ ಸಮಗ್ರ ಅಭಿವೃದ್ಧಿಗೆ ಶ್ರಮವಿಸಬೇಕೆಂದು ಸಾರ್ವಜನಿಕರು ಮನವಿ ಮಾಡಿದರು.
ಶಾಸಕ ಕೆ.ಎಂ.ಉದಯ್ ಮಾತನಾಡಿ, ಮದ್ದೂರು ಕ್ಷೇತ್ರದಲ್ಲಿ 30 ವರ್ಷಗಳಿಗೂ ಅಧಿಕವಾದ ಸಮಸ್ಯೆಗಳು ಆಳವಾಗಿ ಬೇರು ಬಿಟ್ಟಿವೆ. ಕ್ಷೇತ್ರದ ಎಲ್ಲೆಡೆ ಸಾವಿರಾರು ಸಮಸ್ಯೆಗಳಿವೆ. ನನ್ನ ಶಾಸಕ ಸ್ಥಾನದ ಅವಧಿಯಲ್ಲಿ ಶಕ್ತಿಮೀರಿ ಪ್ರಯತ್ನಿಸಿ ಸಮಸ್ಯೆಗಳನ್ನು ಬಗೆಹರಿಸುತ್ತೇನೆ. ನಾಲೆಗಳ ಆಧುನೀಕರಣ ಹಾಗೂ ರಸ್ತೆಗಳ ಅಭಿವೃದ್ಧಿಗಾಗಿ 150 ಕೋಟಿ ರೂ. ಅಂದಾಜು ಪಟ್ಟಿಗೆ ಸರ್ಕಾರ ಅನುಮೋದನೆ ನೀಡಿದೆ. ಶೀಘ್ರದಲ್ಲಿ ಹಣ ಬಿಡುಗಡೆ ಆಗಲಿದೆ. ನಂತರ ಕ್ಷೇತ್ರವನ್ನು ನಾಗಲೋಟದಲ್ಲಿ ಅಭಿವೃದ್ಧಿ ಮಾಡುತ್ತೇನೆ. ನನಗೆ ನೀವೆಲ್ಲರೂ ಸಹಕಾರ ನೀಡಬೇಕು ಎಂದು ಕೋರಿದರು.
ಗೊರವನಹಳ್ಳಿ ಗ್ರಾಪಂ ಅಧ್ಯಕ್ಷ ಗೌರಮ್ಮ, ಉಪಾಧ್ಯಕ್ಷ ಉಮೇಶ್, ಸದಸ್ಯರಾದ ಜಿ.ಬಿ.ಶಂಕರೇಗೌಡ, ಮಧು, ಮುಖಂಡರಾದ ಜವರೇಗೌಡ, ಸಿದ್ದರಾಮ, ಕೃಷ್ಣಪ್ಪ, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕದಲೂರು ರಾಮಕೃಷ್ಣ, ಎಂ. ಹೊಂಬಯ್ಯ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.