ಜನಸಂಪರ್ಕ ಸಭೆಯಲ್ಲಿ ಗ್ರಾಮಸ್ಥರ ದೂರು ದುಮ್ಮಾನ

02M.D.R.2
Published on

ಮದ್ದೂರು: ಚರಂಡಿ ಸ್ವಚ್ಛ ಮಾಡಿಸಿಕೊಡಿ, ಹದಗೆಟ್ಟ ರಸ್ತೆಗಳಿಂದ ಸಂಚಾರ ಮಾಡಲು ಆಗುತ್ತಿಲ್ಲ, ಅನೈರ್ಮಲ್ಯ ತಾಂಡವವಾಡುತ್ತಿದೆ, ಸೊಳ್ಳೆಗಳ ಕಾಟ ಜಾಸ್ತಿಯಾಗಿದೆ, ನಾಲೆಗಳನ್ನು ದುರಸ್ತಿ ಮಾಡಿಸಿಕೊಡಿ… ಇತ್ಯಾದಿ ಸಮಸ್ಯೆಗಳು ಮತ್ತು ಬೇಡಿಕೆಗಳನ್ನು ಗ್ರಾಮಸ್ಥರು ಶಾಸಕ ಕೆ.ಎಂ.ಉದಯ್ ಅವರ ಮುಂದಿಟ್ಟರು.


ತಾಲೂಕಿನ ಸೋಮನಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಬುಧವಾರ ಶಾಸಕರು ಅಧಿಕಾರಿಗಳ ಜತೆ ಜನಸಂಪರ್ಕ ಸಭೆ ನಡೆಸಿದ ಸಂದರ್ಭದಲ್ಲಿ ಗ್ರಾಮಸ್ಥರು ಸಮಸ್ಯೆಗಳ ಸುರಿಮಳೆಯನ್ನೇ ಹರಿಸಿದರು. ಗ್ರಾಪಂ ಕಚೇರಿಗಳಲ್ಲಿ ನಮ್ಮ ಕೆಲಸಗಳು ಸಮರ್ಪಕವಾಗಿ ಆಗುತ್ತಿಲ್ಲ, ವೃದ್ಧಾಪ್ಯ ವೇತನ, ವಿಧವಾ ವೇತನ ಸೇರಿಯಾಗಿ ಬರುತ್ತಿಲ್ಲ, ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂಬುದು ಸೇರಿದಂತೆ ಹಲವಾರು ಸಮಸ್ಯೆಗಳನ್ನು ಶಾಸಕರು ಹಾಗೂ ಅಧಿಕಾರಿಗಳ ಮುಂದೆ ತೆರೆದಿಟ್ಟರು.


ಎಲ್ಲವನ್ನೂ ತಾಳ್ಮೆಯಿಂದ ಆಲಿಸಿದ ಶಾಸಕ ಕೆ.ಎಂ.ಉದಯ್ ಅವರು, ಸಮಸ್ಯೆಗಳನ್ನು ಬಗೆಹರಿಸುವ ಉದ್ದೇಶದಿಂದ ತಾಲೂಕಿನಾದ್ಯಂತ ಜನಸಂಪರ್ಕ ಸಭೆಗಳನ್ನು ಮಾಡಿ ನೀವಿರುವಲ್ಲಿಗೇ ನಾನು ತಾಲೂಕು ಮಟ್ಟದ ಅಧಿಕಾರಿಗಳನ್ನು ಕರೆದುಕೊಂಡು ಬಂದಿದ್ದೇನೆ. ನಿಮ್ಮ ಎಲ್ಲ ಸಮಸ್ಯೆಗಳು ಶೀಘ್ರವಾಗಿ ಬಗೆಹರಿಯಲಿವೆ. ಈ ಬಗ್ಗೆ ನೀವು ಆತಂಕಕ್ಕೆ ಒಳಗಾಗುವುದು ಬೇಡ ಎಂದು ಗ್ರಾಮಸ್ಥರಿಗೆ ಭರವಸೆ ನೀಡಿದರು.
ಗ್ರಾಮಾಂತರ ಪ್ರದೇಶದಲ್ಲಿ ಸಾಕಷ್ಟು ಸಮಸ್ಯೆಗಳು ತಾಂಡವವಾಡುತ್ತಿದ್ದರೂ ಇಷ್ಟು ವರ್ಷ ಅಧಿಕಾರಿಗಳು ಏನು ಮಾಡುತ್ತಿದ್ದರು ಎಂಬುದೇ ಯಕ್ಷಪ್ರಶ್ನೆಯಾಗಿದೆ. ಮುಂದಿನ ದಿನಗಳಲ್ಲಾದರೂ ಅಧಿಕಾರಿಗಳು ಜನರು ಹಾಗೂ ರೈತರ ಸ್ನೇಹಿಯಾಗಿ ಕೆಲಸ ಮಾಡಬೇಕು. ಇಲ್ಲದಿದ್ದರೆ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.


ಸೋಮನಹಳ್ಳಿ, ರುದ್ರಾಕ್ಷಿಪುರ, ನಿಡಘಟ್ಟ, ಹೊಟ್ಟೆಗೌಡನದೊಡ್ಡಿ, ಕೊಂಗಬೋರನದೊಡ್ಡಿ, ಮಾದಪುರದೊಡ್ಡಿ, ತಿಪ್ಪೂರು, ಮಾದನಾಯಕನಹಳ್ಳಿ, ತೈಲೂರು, ಹಾಗಲಹಳ್ಳಿ, ನೀಲಕಂಠನಹಳ್ಳಿ, ಆಲೂರು ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಜನಸಂರ್ಪಕ ನಡೆಸಿ ಗ್ರಾಮಸ್ಥರಿಂದ ಅಹವಾಲು ಸ್ವೀಕರಿಸಲಾಯಿತು.


ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕದಲೂರು ರಾಮಕೃಷ್ಣ, ತಾಪಂ ಮಾಜಿ ಸದಸ್ಯ ಚಲುವರಾಜು, ಗ್ರಾಪಂ ಮಾಜಿ ಅಧ್ಯಕ್ಷ ಎನ್.ಎಂ.ಪ್ರಕಾಶ್, ಮುಖಂಡರಾದ ತೈಲೂರು ರಘು, ವಿನಯ್‌ರಾಮಕೃಷ್ಣ, ಕೆ.ಎಂ.ರವಿಕುಮಾರ್, ಗ್ರಾಮ ಅಧ್ಯಕ್ಷ ಖುದ್ದೇಶ್, ಸದಸ್ಯರಾದ ಮಟ್ಟನಹಳ್ಳಿ ಮಹೇಶ್, ಉಮಾ, ವರಲಕ್ಷ್ಮೀ, ರಘು, ಬಸವರಾಜು, ಪ್ರಸನ್ನ, ರವಿ, ಯತೀಶ್, ಸತೀಶ್ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net