

ಲಕ್ಷ್ಮೇಶ್ವರ: ಕರೊನಾ ವೈರಾಣು ತಡೆಗಟ್ಟಲು ತಾಲೂಕಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಮೂಲಕ ಜನಜಾಗೃತಿ ಮೂಡಿಸಲು ತಹಸೀಲ್ದಾರ್ ಭ್ರಮರಾಂಬ ಗುಬ್ಬಿಶೆಟ್ಟಿ ಅವರು ಗುರುವಾರ ಸರಣಿ ಸಭೆಗಳನ್ನು ನಡೆಸಿದರು.
ಬೆಳಗ್ಗೆ ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದಲ್ಲಿ ಮುಖಂಡರು, ಮಂದಿರ-ಮಸೀದಿ, ಬಸೀದಿ, ಕಲ್ಯಾಣಮಂಟಪ, ಸಮುದಾಯ ಭವನಗಳ ಮುಖ್ಯಸ್ಥರ ಸಭೆ ಕರೆದು ಕರೊನಾ ಸೋಂಕಿನಿಂದ ಜನರನ್ನು ರಕ್ಷಿಸಲು ಸರ್ಕಾರ ಕೈಗೊಂಡಿರುವ ನಿರ್ದೇಶನಗಳ ಬಗ್ಗೆ ಮಾಹಿತಿ ನೀಡಿದರು.
ಪುರಸಭೆ ಮುಖ್ಯಾಧಿಕಾರಿ ಆರ್.ಎಂ. ಪಾಟೀಲ ಮಾತನಾಡಿ, ಪಟ್ಟಣದಲ್ಲಿ ಈಗಾಗಲೇ ಬೀದಿಬದಿ ಆಹಾರ ಪದಾರ್ಥಗಳ ಮಾರಾಟ, ಮಾಂಸ, ಮೀನು ಮಾರಾಟ ಬಂದ್ ಮಾಡಲಾಗಿದೆ. ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ ಎಂದರು.
ಮಾ. 20 ರಂದು ಸಂತೆ ರದ್ದುಗೊಳಿಸುವಂತೆ ಮುಖ್ಯಾಧಿಕಾರಿಗೆ ತಹಸೀಲ್ದಾರರು ಸೂಚಿಸಿದರು.
ಪಟ್ಟಣದಲ್ಲಿರುವ 12ಕ್ಕೂ ಹೆಚ್ಚು ಕಲ್ಯಾಣ ಮಂಟಪಗಳ ಮುಖ್ಯಸ್ಥರಿಗೆ ಈಗಾಗಲೇ ಮದುವೆ ಇತರ ಸಮಾರಂಭಗಳು ನಿಗದಿಯಾಗಿದ್ದರೆ ಹೆಚ್ಚಿನ ಸಂಖ್ಯೆಯಲ್ಲಿ ಜನಸಂದಣಿಯಾಗದಂತೆ ಮತ್ತು ಹೆಚ್ಚು ಆಹಾರ ಸಿದ್ಧಪಡಿಸದಂತೆ ನೋಡಿಕೊಳ್ಳಬೇಕು. ಅಲ್ಲದೆ, ಮಾ. 23 ರ ಅಮಾವಾಸ್ಯೆಗೆ ದೂದಪೀರಾ ದರ್ಗಾಕ್ಕೆ ಹೊರರಾಜ್ಯ, ಜಿಲ್ಲೆಗಳ ಭಕ್ತರಿಗೆ ಬರದಂತೆ ಸೂಚಿಸಬೇಕು ಮತ್ತು ಒಂದೊಮ್ಮೆ ಬಂದ ಭಕ್ತರನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿ ವಿಶೇಷ ವ್ಯವಸ್ಥೆ ಕಲ್ಪಿಸಬೇಕು. ವೈರಸ್ ತಡೆಗಟ್ಟುವ ಬಗ್ಗೆ ಅವರದೇ ಆದ ಭಾಷೆಯಲ್ಲಿ ಧ್ವನಿವರ್ಧಕದ ಮೂಲಕ ತಿಳಿಸಬೇಕು ಎಂದು ಸೂಚಿಸಿದರು.
ಸಂಜೆ ಕರೆದಿದ್ದ ಸರ್ಕಾರಿ ಮತ್ತು ಖಾಸಗಿ ವೈದ್ಯರ ಸಭೆಯಲ್ಲಿ, ಗ್ರಾಮೀಣ ಪ್ರದೇಶಗಳ ಜನರು ಉದ್ಯೋಗ ಅರಸಿ ಹೋದವರು ತಮ್ಮ ಬಳಿ ಬಂದಾಗ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದಲ್ಲಿ ಆರೋಗ್ಯಾಧಿಕಾರಿಗಳಿಗೆ ಮಾಹಿತಿ ನೀಡಬೇಕು. ಖಾಸಗಿ ಆಸ್ಪತ್ರೆ ಮತ್ತು ವಸತಿ ಗೃಹಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ರೋಗಿಗಳ ಬಗ್ಗೆ ಸಂಪೂರ್ಣ ಮಾಹಿತಿ ಇರಲಿದ್ದು ಕರೆನಾ ತಡೆಗಟ್ಟುವಲ್ಲಿ ಖಾಸಗಿ ವೈದ್ಯರ ಪಾತ್ರ ಮುಖ್ಯವಾಗಿದ್ದು ಸರ್ಕಾರದೊಂದಿಗೆ ಕೈ ಜೋಡಿಸಬೇಕು ಎಂದರು.
ಮಾಜಿ ಶಾಸಕ ಜಿ.ಎಂ. ಮಹಾಂತಶೆಟ್ಟರ್, ಜಿ.ಎಸ್. ಗಡ್ಡದೇವರಮಠ ಮಾತನಾಡಿ, ಕರೊನಾ ವೈರಾಣು ತಡೆಗಟ್ಟುವಲ್ಲಿ ಯುವಕರು, ಸಂಘಟನೆಯವರು, ಸ್ಥಳೀಯ ಸಂಸ್ಥೆಯವರು ಸ್ವಯಂ ಪ್ರೇರಣೆಯಿಂದ ಸಮರೋಪಾದಿಯಲ್ಲಿ ಸನ್ನದ್ಧರಾಗಬೇಕಿದೆ ಎಂದರು.
ಹಿರಿಯ ವೈದ್ಯರಾದ ಡಾ.ಎಸ್.ಸಿ. ಮಲ್ಲಾಡದ, ಡಾ. ವೈ.ಎಫ್. ಹಂಜಿ ಮಾತನಾಡಿದರು.
ಸಭೆಯಲ್ಲಿ ಸಿಪಿಐ ಆರ್.ಎಚ್. ಕಟ್ಟಿಮನಿ, ತಾಲೂಕು ವೈದ್ಯಾಧಿಕಾರಿ ಸುಭಾಸ್ ದಾಯಗೊಂಡ, ಡಾ.ಗಿರೀಶ ಮರಡ್ಡಿ, ಉಪತಹಸೀಲ್ದಾರ್ ಎಂ.ಜಿ. ದಾಸಪ್ಪನವರ, ಕಂದಾಯ ನಿರೀಕ್ಷಕ ಎಸ್.ಎಸ್. ಪಾಟೀಲ, ಸಿ.ಜೆ. ಬಾಳಿಹಳ್ಳಿಮಠ, ಜಯನಂದಸ್ವಾಮಿ ಹಿರೇಮಠ, ಡಾ. ಚಂದ್ರು ಲಮಾಣಿ, ಡಾ. ಪಿ.ಡಿ. ತೋಟದ, ಡಾ. ಎಸ್.ಎಸ್. ಬಡಬಡೆ, ಡಾ. ಪ್ರಸನ್ನ ಕುಲಕರ್ಣಿ, ಡಾ. ವಿನೋದ ಹೊನ್ನಿಕೊಪ್ಪ ಸೇರಿ ದರ್ಗಾ, ಅಂಜುಮನ್, ದೇವಸ್ಥಾನಗಳ ಕಮಿಟಿ ಮುಖ್ಯಸ್ಥರು, ಪುರಸಭೆ ಸದಸ್ಯರು, ಹೋಟೆಲ್ ಮಾಲೀಕರು ಪಾಲ್ಗೊಂಡಿದ್ದರು.