ಜನಸಂಚಾರ ನಿರಂತರ, ನಿರಾತಂಕ

3 Dwd 3
Published on

ಧಾರವಾಡ: ಕರೊನಾ ವೈರಸ್ ಹರಡುವಿಕೆ ತಡೆಯಲು ದೇಶಾದ್ಯಂತ ಏ. 14ರವರೆಗೆ ಲಾಕ್​ಡೌನ್ ಘೊಷಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ನಗರದಲ್ಲಿ ಜಿಲ್ಲಾಡಳಿತ ನಿಷೇಧಾಜ್ಞೆ ಜಾರಿಗೊಳಿಸಿದೆ. ಆದರೆ, ಶುಕ್ರವಾರ ಇಡೀ ದಿನ ಜನ ಹಾಗೂ ವಾಹನಗಳ ಸಂಚಾರ ಎಂದಿನಂತೆ ಕಂಡುಬಂತು. ನಗರದ ಪ್ರಮುಖ ವೃತ್ತಗಳಲ್ಲಿ ಪೊಲೀಸರ ಪಹರೆ ಇದೆ. ಆದಾಗ್ಯೂ ನಿಷೇಧಾಜ್ಞೆ ಮರೆತು ವಾಹನಗಳ ಸವಾರರು ಸುತ್ತಾಡುತ್ತಿರುವುದು ಕಂಡುಬಂತು. ಅಲ್ಲಲ್ಲಿ ಅರೆಬರೆ ತೆರೆದ ಅಂಗಡಿ- ಮುಂಗಟ್ಟುಗಳ ಮುಂದೆ ಜನಸಂದಣಿ ಕಂಡುಬಂತು. ಜನವಸತಿ ಪ್ರದೇಶಗಳಲ್ಲಿ ಮಕ್ಕಳೊಂದಿಗೆ ಯುವಕ- ಯುವತಿಯರು ಶಟ್ಲ್ ಆಡುತ್ತಿದ್ದರು. ಮತ್ತೆ ಕೆಲವೆಡೆ ಯುವಕರು ಕ್ರಿಕೆಟ್ ಆಡುತ್ತಿದ್ದುದು ಸಾಮಾನ್ಯವಾಗಿತ್ತು.

ಸಚಿವರೊಂದಿಗೆ ಕಾರ್ಯಕರ್ತರ ಪಡೆ: ಕರೊನಾ ಹಿನ್ನೆಲೆಯಲ್ಲಿ ಎಲ್ಲೆಡೆ ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಜಿಲ್ಲಾಡಳಿತವೇ ಸೂಚಿಸಿದೆ. ಪ್ರತಿದಿನ ಜರುಗುವ ಸಭೆಗಳಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಅಂತರ ಕಾಯ್ದುಕೊಂಡು ಕೂಡುತ್ತಿದ್ದಾರೆ. ಆದರೆ ಸಾಮಾಜಿಕ ಅಂತರ ಪರಿಕಲ್ಪನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಮರೆತರಾ? ಎಂಬ ಉದ್ಭವಿಸಿತು. ಕೊಳಚೆ ಪ್ರದೇಶದ ಜನರಿಗೆ ಉಚಿತವಾಗಿ ಹಾಲು ವಿತರಿಸುವ ಕಾರ್ಯಕ್ರಮವನ್ನು ಶುಕ್ರವಾರ ಇಲ್ಲಿನ ಶ್ರೀನಗರದ ಭಾವಿಕಟ್ಟಿ ಪ್ಲಾಟ್​ನಲ್ಲಿ ಆಯೋಜಿಸಲಾಗಿತ್ತು. ಸಾಂಕೇತಿಕವಾಗಿ ನಡೆಯಬೇಕಿದ್ದ ಕಾರ್ಯಕ್ರಮದಲ್ಲಿ ಶಾಸಕರಾದ ಅರವಿಂದ ಬೆಲ್ಲದ, ಅಮೃತ ದೇಸಾಯಿ ಪಾಲ್ಗೊಂಡಿದ್ದರು. ಜೊತೆಗೆ ಜಿಲ್ಲಾಧಿಕಾರಿ ದೀಪಾ ಚೋಳನ್, ಎಸ್​ಪಿ ವರ್ತಿಕಾ ಕಟಿಯಾರ್, ಮಹಾನಗರ ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ, ಧಾರವಾಡ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಸುರೇಶ ನಾಯಕ, ಜಂಟಿ ನಿರ್ದೇಶಕ ಡಿ.ಟಿ. ಕಳಸದ, ಉಪ ವ್ಯವಸ್ಥಾಪಕ ಆನಂದ ಬಬಲೇಶ್ವರ, ನೋಡಲ್ ಅಧಿಕಾರಿ ನಂದೀಶ ಪ್ಯಾಟಿಮಠ ಪಾಲ್ಗೊಂಡಿದ್ದರು. ಸಾಲದೆಂಬಂತೆ ಬಿಜೆಪಿ ಕಾರ್ಯಕರ್ತರ ಪಡೆ ಜಮಾವಣೆಗೊಂಡಿತ್ತು. ಜಿಲ್ಲೆಯ ಜನಪ್ರತಿನಿಧಿಗಳು, ಜಿಲ್ಲಾಡಳಿತ ಹಾಗೂ ಕೆಎಂಎಫ್ ಅಧಿಕಾರಿಗಳು, ಪಕ್ಷದ ಕಾರ್ಯಕರ್ತರ ಗುಂಪು ಕಟ್ಟಿಕೊಂಡು ಹಾಲು ವಿತರಿಸಿದ್ದು, ಪರಸ್ಪರರ ಮಧ್ಯೆ ಸುರಕ್ಷಿತ ಅಂತರ ಕಂಡುಬರಲಿಲ್ಲ. ಇದು ಸರಿಯೆ ಎಂಬ ಪ್ರಶ್ನೆ ಕಾಡತೊಡಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net