

ವಿಜಯವಾಣಿ ಸುದ್ದಿಜಾಲ ಧಾರವಾಡ
ಭಾರತದಲ್ಲಿ ಜನಸಂಖ್ಯಾ ಸ್ಫೋಟವು ಅಣುಬಾಂಬಿನ ಸ್ಫೋಟದ ದುಷ್ಪರಿಣಾಮಕ್ಕಿಂತ ಭೀಕರವಾದದ್ದು, ಮುಂಬರುವ ಯುಗವು ಪರಮಾಣು ಯುಗವಾಗಿರದೆ ಜನಸಂಖ್ಯಾ ಸ್ಫೋಟದ ಯುಗವಾಗಲಿದೆ ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ವೀರಣ್ಣ ಒಡ್ಡೀನ ಹೇಳಿದರು.
ವಿಶ್ವ ಜನಸಂಖ್ಯಾ ದಿನ ನಿಮಿತ್ತ ತಾಲೂಕಿನ ವೀರಾಪುರ ಸರ್ಕಾರಿ ಪ್ರೌಢ ಶಾಲೆ ಹಾಗೂ ಹು-ಧಾ ನಾಗರಿಕ ಪರಿಸರ ಸಮಿತಿ ಆಶ್ರಯದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಜನಸಂಖ್ಯಾ ಸ್ಫೋಟ ಸಮಸ್ಯೆ ಒಂದು ದುಷ್ಟರಿಣಾಮ ಹಲವು ವಿಷಯ ಕುರಿತು ಉಪನ್ಯಾಸ ನೀಡಿದರು.
ಭಾರತದಲ್ಲಿ ನಾಗಾಲೋಟದಂತೆ ಬೆಳೆಯುತ್ತಿರುವ ಜನಸಂಖ್ಯೆ ಅನೇಕ ಜಟಿಲ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಇದರಿಂದ ದೇಶದ ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಗತಿ, ಶೈಕ್ಷಣಿಕ ಪ್ರಗತಿ, ಆರ್ಥಿಕ ಪ್ರಗತಿಯಂತಹ ಪ್ರಗತಿಪರ ಚಟುವಟಿಕೆಗಳು ವ್ಯರ್ಥವಾಗುವ ಸಾಧ್ಯತೆ ಇದೆ. ಜನಸಂಖ್ಯೆ ನಿಯಂತ್ರಿಸದಿದ್ದರೆ ಭಾರತದ ಸ್ಥಿತಿ ಗಂಭೀರವಾಗಲಿದೆ. ಜನಸಂಖ್ಯಾ ನಿಯಂತ್ರಣಕ್ಕೆ ಕುಟುಂಬ ಕಲ್ಯಾಣ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕಿದೆ. ಅದು ಸರ್ಕಾರಿ ಯೋಜನೆ ಎಂದು ಪರಿಗಣಿಸದೆ ಜನಸಾಮಾನ್ಯರ ಯೋಜನೆ ಎಂದು ಅರಿಯಬೇಕು ಎಂದರು.
ಪರಿಸರ ಸಮಿತಿ ಅಧ್ಯಕ್ಷ ಶಂಕರ ಕುಂಬಿ ಸಮಾರಂಭ ಉದ್ಘಾಟಿಸಿ ಮಾತನಾಡಿ, ಜನಸಂಖ್ಯಾ ಸ್ಫೋಟದಿಂದ ಜಲ ಮಾಲಿನ್ಯ, ವಾಯು ಮಾಲಿನ್ಯ, ಭೂ ಮಾಲಿನ್ಯ ಉಂಟಾಗುವುದರ ಜತೆಗೆ ದಟ್ಟ ಅರಣ್ಯ ನಾಶವಾಗಿ ಜನಾವೃತ್ತವಾಗಿ, ನೈಸರ್ಗಿಕ ಸಂಪನ್ಮೂಲಗಳ ಕೊರತೆ ಉಂಟಾಗಲಿದೆ. ಭವಿಷ್ಯದಲ್ಲಿ ಜನರು ದಿನಬಳಕೆ ವಸ್ತುಗಳಿಗೂ ಹೋರಾಟ ಮಾಡುವ ಸ್ಥಿತಿ ಬರಲಿದೆ. ಈ ಕುರಿತು ಪ್ರತಿಯೊಬ್ಬರೂ ಜಾಗೃತೆ ವಹಿಸುವುದು ಅಗತ್ಯ ಎಂದರು.
ಮುಖ್ಯಾಧ್ಯಾಪಕಿ ಮಂಗಳಗೌರಿ ಬಡಿಗೇರ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಶಿಕ್ಷಕ ಮಹಾಂತೇಶ ನರೇಗಲ್ಲ, ಪ್ರತಿಭಾ ಪಾಟೀಲ, ಸ್ಮೀತಾ ವಡಗಾವಿ, ಪರಿಮಳಾ, ಸುವರ್ಣಾ ಪಾಟೀಲ, ಉಮಾದೇವಿ ಪಾಟೀಲ, ಪಿ.ಎಂ. ಬಾಗಡೆ, ಮೈಲಾರಿ ಶೀಗಿಹಳ್ಳಿ, ಇತರರು ಇದ್ದರು.
ಸುನಂದಾ ಹಳ್ಳೂರ ಸ್ವಾಗತಿಸಿದರು. ಎ.ಎ. ಬೆಣ್ಣಿ ನಿರೂಪಿಸಿದರು. ಸುರೇಶ ಮುಗಳಿ ವಂದಿಸಿದರು.